ಭಾರತದಲ್ಲಿ ಕೊರೋನ ಚೇತರಿಕೆ ಪ್ರಕರಣ 60 ಲಕ್ಷಕ್ಕೆ ಏರಿಕೆ

Update: 2020-10-11 16:47 GMT

ಹೊಸದಿಲ್ಲಿ,ಅ.11: ಭಾರತದಲ್ಲಿ ಕೋವಿಡ್-19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯು ರವಿವಾರ 60 ಲಕ್ಷದ ಗಡಿಯನ್ನು ದಾಟಿದ್ದು, ಸತತವಾಗಿ ಕಳೆದ ಎಂಟು ದಿನಗಳಿಂದ ಕೊರೋನವೈರಸ್‌ನಿಂದ ಮೃತಪಟ್ಟವರ ದೈನಂದಿನ ಸಂಖ್ಯೆ 1 ಸಾವಿರಕ್ಕಿಂತ ಕೆಳಗೆ ಉಳಿದುಕೊಂಡಿದೆಯೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶಾದ್ಯಂತ ಸತತವಾಗಿ ಮೂರನೇ ದಿನವೂ ಕೂಡಾ ಸಕ್ರಿಯ ಕೊರೋನ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 9 ಲಕ್ಷಕ್ಕಿಂತ ಕಡಿಮೆಯಿರುವುದಾಗಿ ಅದು ಹೇಳಿಕೆಯಲ್ಲಿ ತಿಳಿಸಿದೆ.

ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯ ಹೆಚ್ಚಳದೊಂದಿಗೆ ಭಾರತವು ಗರಿಷ್ಠ ಚೇತರಿಕೆಯ ಪ್ರಕರಣಗಳಲ್ಲಿ ಜಾಗತಿಕವಾಗಿ ಮುಂಚೂಣಿಯ ಸ್ಥಾನದಲ್ಲಿದೆಯೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.

  ಕಳೆದ 24 ತಾಸುಗಳಲ್ಲಿ 89,154 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಕೊರೋನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 60,77,976ಕ್ಕೇರಿದ್ದು, ಚೇತರಿಕೆಯ ಪ್ರಮಾಣವು 86.17 ಶೇಕಡಕ್ಕೇರಿದೆ ಎಂದು ರವಿವಾರ ಬೆಳಗ್ಗೆ 8:00 ಗಂಟೆಗೆ ಪ್ರಕಟವಾದ ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

 ದೇಶದಲ್ಲಿ ಹೊಸತಾಗಿ ಚೇತರಿಕೆಯಾದ ಪ್ರಕರಣಗಳ ಪೈಕಿ ಶೇ.80ರಷ್ಟು ಮಹಾರಾಷ್ಟ್ರ,ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ಒಡಿಶಾ, ಪಶ್ಚಿಮಬಂಗಾಳ,ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತವಾದ ದಿಲ್ಲಿಯಲ್ಲಿ ವರದಿಯಾಗಿರುವುದಾಗಿ ಅಂಕಿಅಂಶಗಳು ತಿಳಿಸಿವೆ.

  ಕೇರಳದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಕೊರೋನ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ ಆನಂತರದ ಸ್ಥಾನದಲ್ಲಿದೆ. ಈ ಎರಡೂ ರಾಜ್ಯಗಳಲ್ಲಿ ಕಳೆದ 24 ತಾಸುಗಳಲ್ಲಿ 11 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ.

  ದೇಶಾದ್ಯಂತ ವೈದ್ಯಕೀಯ ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಮಾಣಿತ ಚಿಕಿತ್ಸಾ ಶಿಷ್ಟಾಚಾರ, ವೈದ್ಯರು, ಆರೆ ವೈದ್ಯಕೀಯ ಸಿಬ್ಬಂದಿ ಹಾಗೂ ಮುಂಚೂಣಿಯ ಕಾರ್ಯಕರ್ತರ ಸಂಪೂರ್ಣ ಸಮರ್ಪಣಾಭಾವ ಹಾಗೂ ಬದ್ಧತೆಯಿಂದಾಗಿ ಕೋವಿಡ್-19 ಸೋಂಕಿನಿಂದಾಗುವ ದೈನಂದಿನ ಸಾವಿನ ಸಂಖ್ಯೆಯಲ್ಲಿ ಸ್ಥಿರವಾದ ಇಳಿಕೆಯುಂಟಾಗಿದೆ ಹಾಗೂ ಒಟ್ಟು ಚೇತರಿಕೆಯ ಸಂಖ್ಯೆಯಲ್ಲಿ ನಿರಂತರವಾದ ಏರಿಕೆಯಾಗಿದೆ’’ ಎಂದು ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News