ಉ.ಪ್ರ.ದಂತೆ ರಾಜಸ್ಥಾನ ಕೂಡಾ ಜಂಗಲ್‌ರಾಜ್: ಕೈ ಸರಕಾರದ ವಿರುದ್ಧ ಮಾಯಾ ಕಿಡಿ

Update: 2020-10-11 15:19 GMT

ಲಕ್ನೋ,ಅ.11: ರಾಜಸ್ಥಾನದಲ್ಲಿ ದಲಿತರು ಹಾಗೂ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಗಣನೀಯ ಹೆಚ್ಚಳವಾಗಿರುವುದಕ್ಕಾಗಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ  ಬಿಎಸ್ಪಿ ನಾಯಕಿ ಮಾಯಾವತಿ ರವಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉತ್ತರಪ್ರದೇಶದ ಹಾಗೆಯೇ, ಕಾಂಗ್ರೆಸ್ ಆಳ್ವಿಕೆಯ ರಾಜ್ಯವಾದ ರಾಜಸ್ಥಾನ ಕೂಡಾ ‘ಜಂಗಲ್‌ರಾಜ್’ ಆಗಿದೆ.ಯೆಂದು ಅವರು ಕಿಡಿಕಾರಿದ್ದಾರೆ.

ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಬಗ್ಗೆ ರಾಜಸ್ಥಾನದ ಕಾಂಗ್ರೆಸ್ ನಾಯಕರು ಗಾಢವಾದ ಮೌನವನ್ನು ತಾಳಿದ್ದಾರೆಂದು ಅವರು ಟ್ವೀಟಿಸಿದ್ದಾರೆ.

‘‘ ಉತ್ತರಪ್ರದೇಶದಂತೆ ಕಾಂಗ್ರೆಸ್ ಆಳ್ವಿಕೆಯ ರಾಜಸ್ಥಾನದಲ್ಲಿಯೂ ಎಲ್ಲಾ ವಿಧದ ಅಪರಾಧಗಳು, ಅದರಲ್ಲೂ ವಿಶೇಷವಾಗಿ ಅಮಾಯಕ ಜನರ ಕೊಲೆಗಳು ನಡೆಯುತ್ತಿವೆ. ದಲಿತರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಪರಾಕಾಷ್ಠೆಗೇರಿದೆ. ಬೇರೆ ಪದಗಳಲ್ಲಿ ಹೇಳುವುದಾದರೆ, ಇಲ್ಲಿ ಕಾನೂನಿನ ಪ್ರಭುತ್ವವಿಲ್ಲ, ಆದರೆ ಜಂಗಲ್‌ರಾಜ್ ಅಸ್ತಿತ್ವದಲ್ಲಿದೆ. ಇದು ಅತ್ಯಂತ ನಾಚಿಕೆಗೇಡಿನದ್ದಾಗಿದೆ ಹಾಗೂ ಕಳವಳಕಾರಿಯಾಗಿದೆ’’ ಎಂದು ಮಾಯಾವತಿ ಟ್ವೀಟಿಸಿದ್ದಾರೆ.

‘‘ಆದರೆ ಇದಕ್ಕಾಗಿ ಸರಕಾರದ ಮೇಲಿನ ಮೂಗುದಾರವನ್ನು ಬಿಗಿಹಿಡಿಯುವ ಬದಲು ಕಾಂಗ್ರೆಸ್ ನಾಯಕರು ಗಾಢವಾದ ಮೌನವನ್ನು ತಾಳಿದ್ದಾರೆ. ಕಾಂಗ್ರೆಸ್ ನಾಯಕರು ಸಂತ್ರಸ್ತರನ್ನು ಭೇಟಿಯಾಗುತ್ತಿರುವುದು ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿಯೇ ಹೊರತು ಬೇರೇನೂ ಅಲ್ಲವೆಂಬುದನ್ನು ಇದು ಸೂಚಿಸುತ್ತದೆ. ಇಂತಹ ನಾಟಕಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕೆಂಬುದೇ ಬಿಎಸ್ಪಿಯ ಸಲಹೆಯಾಗಿದೆ’’ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News