×
Ad

ಸ್ಮಾರ್ಟ್ ಸಿಟಿ ಯೋಜನೆ ; ದ.ಕ. ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಕಚೇರಿಗೆ ಕುತ್ತು

Update: 2020-10-11 21:17 IST

ಮಂಗಳೂರು, ಅ.11: ನಗರದ ಹಂಪನಕಟ್ಟೆ ಬಳಿಯಿರುವ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣ ಗೊಳ್ಳಲಿರುವ ಸೂಪರ್ ಸ್ಪೆಷಾಲಿಟಿ ಸರ್ಜಿಕಲ್ ಬ್ಲಾಕ್‌ಗೆ ಸುಮಾರು 60 ವರ್ಷ ಹಳೆಯ ಕಟ್ಟಡವೊಂದು ಬಲಿಯಾಗುವ ಸಾಧ್ಯತೆ ಇದೆ.

ಅಂದರೆ ಸರ್ಜಿಕಲ್ ಬ್ಲಾಕ್ ನಿರ್ಮಿಸುವ ಸಲುವಾಗಿ 1962ರಲ್ಲಿ ಸ್ಥಾಪನೆಯಾಗಿರುವ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಯ ಕಚೇರಿಗೆ ಕುತ್ತು ಬಂದಿದೆ.

ಇದು ಹಳೆಯ ಕಟ್ಟಡವಾದರೂ ಕೂಡ ಕೇವಲ ಐದು ವರ್ಷದ ಹಿಂದೆ 18 ಲಕ್ಷ ರೂ. ಖರ್ಚು ಮಾಡಿ ನವೀಕರಣ ಮಾಡಲಾಗಿದೆ. ಇದರಲ್ಲಿ ಆಡಳಿತ ಕಚೇರಿ, ಆರು ಕೊಠಡಿ, ನಾಲ್ಕು ಶೌಚಾಲಯ, ವಿಶ್ರಾಂತಿ ಗೃಹ, ಕ್ಷಯ ರೋಗ ನಿಯಂತ್ರಣಕ್ಕೆ ಸಂಬಂಧಿಸಿದ ಸೌಲಭ್ಯಗಳು, ದಾಸ್ತಾನು ಕೊಠಡಿ, ಲಕ್ಷಗಟ್ಟಲೆ ಮೊತ್ತದ ಔಷಧ, ಲ್ಯಾಬ್, ಐಇಸಿ ಸಾಧನಗಳಿವೆ. ಆದಾಗ್ಯೂ ಈ ಸುಸಜ್ಜಿತ ಕಟ್ಟಡವನ್ನು ಶೀಘ್ರ ತೆರವು ಮಾಡಲು ಸೂಚಿಸಲಾಗಿದೆ.

ವಿಪರ್ಯಾಸವೆಂದರೆ ಹಳೆಯ ಈ ಕಟ್ಟಡವನ್ನು ಶೀಘ್ರ ತೆರವು ಮಾಡಲು ಸೂಚಿಸಿದ್ದರೂ ಹೊಸ ಜಾಗ ತೋರಿಸಿಲ್ಲ. ಹಾಗಾಗಿ ಇಲ್ಲಿನ ಅಧಿಕಾರಿ, ಸಿಬ್ಬಂದಿ ವರ್ಗಗಳಲ್ಲಿ ಗೊಂದಲ ಸೃಷ್ಟಿಯಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಸೂಪರ್ ಸ್ಪೆಷಾಲಿಟಿ ನಿರ್ಮಿಸಲು ಟೆಂಡರ್ ಮುಗಿದು, ಕಾಮಗಾರಿ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕ್ಷಯ ರೋಗ, ಕುಷ್ಠ ರೋಗ ನಿಯಂತ್ರಣ ಕೇಂದ್ರ, ಸರ್ವೈಲೆನ್ಸ್ ಕಚೇರಿ ಮತ್ತು ಕ್ಲಿನಿಕಲ್ ಲ್ಯಾಬ್‌ಗಳಿರುವ ಎರಡು ಹಳೆಯ ಕಟ್ಟಡಗಳನ್ನು ತೆರವು ಮಾಡುವುದು ಅನಿವಾರ್ಯವಾಗಿದೆ.

ಈಗಾಗಲೆ ಇಲ್ಲಿನ ಎರಡು ವಿಭಾಗವನ್ನು ಡಿಎಚ್‌ಒ ಕಚೇರಿಗೆ ಮತ್ತು ಇನ್ನೆರಡು ಕಚೇರಿ ಜಿಪಂ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಒಂದೋ ಈ ಕಟ್ಟಡ ಉಳಿಸಬೇಕು ಅಥವಾ ಎಲ್ಲ ಸೌಲಭ್ಯವಿರುವ ಬದಲಿ ಕಟ್ಟಡ ತೋರಿಸಬೇಕು. ನಮ್ಮಲ್ಲಿ 60 ಮಂದಿ ಗುತ್ತಿಗೆ ಸಿಬ್ಬಂದಿ ಮತ್ತು ಏಳು ಮಂದಿ ಕಾಯಂ ಸಿಬ್ಬಂದಿಗಳಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿರುವ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ.ಬದ್ರುದ್ದೀನ್ ರಾಜ್ಯದ ಇತರ ಜಿಲ್ಲೆಗಳಲ್ಲಿ ನೋಡೆಲ್ ಡಿಆರ್‌ಟಿಬಿ, ಎಆರ್‌ಟಿ ಸೆಂಟರ್, ಸಿಬಿ ನ್ಯಾಟ್, ಡಾಟ್ ಸೆಂಟರ್ ಎಲ್ಲವೂ ಒಂದೆಡೆ ಇದೆ. ನಮ್ಮಲ್ಲಿ ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗುತ್ತದೆ ಎಂದು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News