ಸರಕಾರದ ಯೋಜನೆಯನ್ನು ಜನರಿಗೆ ತಲುಪಿಸಿ: ಡಾ.ಹರ್ಷ

Update: 2020-10-11 16:10 GMT

ಮಂಗಳೂರು, ಅ.11: ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್.ಹರ್ಷ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ರವಿವಾರ ಭೇಟಿ ನೀಡಿ ಕಚೇರಿಯ ಕಟ್ಟಡ ಸೇರಿದಂತೆ ಕಡತಗಳ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು ದ.ಕ.ಜಿಲ್ಲೆಯು ಸೂಕ್ಷ್ಮ ಜಿಲ್ಲೆಯಾಗಿದೆ. ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಕಚೇರಿಗಳ ಜೊತೆ ಅಧೀನ ಕಚೇರಿಗಳ ಸಹಿತ ಕೇಂದ್ರ ಸರಕಾರದ ಕಚೇರಿಗಳು, ನಿಗಮ ಹಾಗೂ ಸರಕಾರಿ ಸೌಮ್ಯದ ಅನೇಕ ಕಾರ್ಪೋರೇಷನ್ ಕಚೇರಿಗಳಿವೆ. ಅವುಗಳ ಕಾರ್ಯವೈಖರಿ ಹಾಗೂ ಸರಕಾರದ ಯೋಜನೆಗಳು, ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ತಲುಪಿಸುವ ಕೆಲಸವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಗಬೇಕು. ಅದಕ್ಕಾಗಿ ಡಿಜಿಟಲ್ ತಂತ್ರಜ್ಞಾನವನ್ನು ಹೆಚ್ಚೆಚ್ಚು ಬಳಸಬೇಕು ಎಂದರು.

ಕಚೇರಿಯ ಕೆಲಸ ಕಾರ್ಯಗಳು ಮತ್ತು ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಸಿದ ಅವರು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗುವುದು ಎಂದರು.

ಪತ್ರಕರ್ತರ ಆರೋಗ್ಯ ಕರ್ನಾಟಕ ಆಯುಷ್ಮಾನ್ ಕಾರ್ಡ್‌ಗಳನ್ನು ಶೀಘ್ರವಾಗಿ ವಿತರಿಸಬೇಕು ಎಂದು ಸೂಚನೆ ನೀಡಿದ ಅವರು ಗಾಂಧಿ ಭವನವನ್ನು 3 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲು ಈಗಾಗಲೇ ಮೊದಲ ಹಂತದ ಅನುದಾನ ಬಿಡುಗಡೆ ಮಾಡಲಾಗಿದೆ. ನಗರದಲ್ಲಿ ಜಾಗ ಗುರುತಿಸಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಡಾ.ಪಿ.ಎಸ್.ಹರ್ಷ ಸೂಚಿಸಿದರು.

ಈ ಸಂದರ್ಭ ಜಿಲ್ಲಾ ವಾರ್ತಾಧಿಕಾರಿ ಬಿ. ಮಂಜುನಾಥ್, ವಾರ್ತಾ ಸಹಾಯಕ ಶಿವಕುಮಾರ್ ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News