ಯಜಮಾನಿಕೆ ಮಾಡಬೇಡಿ: ಚೀನಾ ಅಧ್ಯಕ್ಷರಿಗೆ ತೈವಾನ್ ಅಧ್ಯಕ್ಷೆ ಮನವಿ
ತೈಪೆ (ತೈವಾನ್), ಅ. 11: ಸೇನಾ ಉದ್ವಿಗ್ನತೆಯನ್ನು ಶಮನಗೊಳಿಸಿ ಹಾಗೂ ‘ನಾವು ಯಾವತ್ತೂ ಪಾರಮ್ಯವನ್ನು ಬಯಸುವುದಿಲ್ಲ’ ಎಂಬ ನಿಮ್ಮ ಭರವಸೆಯನ್ನು ಕಾರ್ಯಗತಗೊಳಿಸಿ ಎಂಬುದಾಗಿ ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಮನವಿ ಮಾಡಿದ್ದಾರೆ.
ವಲಯದಲ್ಲಿ ಚೀನಾದ ಯುದ್ಧ ವಿಮಾನಗಳ ಹಾರಾಟದಿಂದಾಗಿ ತಿಂಗಳುಗಳಿಂದ ಉದ್ಭವಿಸಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ತೈವಾನ್ ಅಧ್ಯಕ್ಷೆ ಈ ಮನವಿ ಮಾಡಿದ್ದಾರೆ.
ಚೀನಾದ ‘ಹೆಚ್ಚುತ್ತಿರುವ ಯಜಮಾನಿಕೆ ಪ್ರವೃತ್ತಿ’ಯಿಂದಾಗಿ ಅಂತರ್‌ರಾಷ್ಟ್ರೀಯ ಸಮುದಾಯವು ಕಳವಳಗೊಂಡಿದೆ ಎಂದು ತೈವಾನ್‌ನ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಮಾತನಾಡಿದ ದೇಶದ ಅಧ್ಯಕ್ಷೆ ಹೇಳಿದರು.
ಪ್ರಜಾಪ್ರಭುತ್ವ ಮತ್ತು ಸ್ವಯಮಾಡಳಿತವಿರುವ ತೈವಾನ್ ತನ್ನದೇ ಭೂಭಾಗವಾಗಿದೆ ಎಂದು ಚೀನಾ ಹೇಳಿಕೊಳ್ಳುತ್ತಿದೆ ಹಾಗೂ ಮುಂದೊಂದು ದಿನ ಬಲಪ್ರಯೋಗದ ಮೂಲಕ ಅದನ್ನು ತನ್ನೊಳಗೆ ಸೇರಿಸಿಕೊಳ್ಳುವ ಸಾಧ್ಯತೆಯನ್ನು ಅದು ನಿರಾಕರಿಸಿಲ್ಲ.
ಆದರೆ, ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಕ್ಸಿ ಜಿನ್‌ಪಿಂಗ್ ಮಾಡಿರುವ ಭಾಷಣವು ಕೊಂಚ ಭರವಸೆಯನ್ನು ಹುಟ್ಟಿಸಿದೆ ಎಂದು ತ್ಸಾಯಿ ಹೇಳಿದರು.
‘‘ಚೀನಾವು ಯಾವತ್ತೂ ತನ್ನ ಭೂಭಾಗವನ್ನು ವಿಸ್ತರಿಸುವುದಿಲ್ಲ, ಯಜಮಾನಿಕೆ ಮಾಡುವುದಿಲ್ಲ ಅಥವಾ ಪ್ರಭಾವ ಬೀರುವುದಿಲ್ಲ ಎಂಬುದಾಗಿ ಜಿನ್‌ಪಿಂಗ್ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾಡಿದ ವೀಡಿಯೊ ಭಾಷಣದಲ್ಲಿ ಹೇಳಿದ್ದಾರೆ. ಇದು ನೈಜ ಬದಲಾವಣೆಯ ಆರಂಭ ಎಂಬುದಾಗಿ ನಾನು ಭಾವಿಸುತ್ತೇನೆ’’ ಎಂದು ಅವರು ನುಡಿದರು.