ಎಲ್ಲಾ ರೈಲುಗಳಿಗೆ ವಿಶೇಷ ಹವಾನಿಯಂತ್ರಿತ ಬೋಗಿಗಳ ಸೇರ್ಪಡೆ: ರೈಲ್ವೆ ಇಲಾಖೆ

Update: 2020-10-11 17:14 GMT

ಹೊಸದಿಲ್ಲಿ, ಅ.11: ಹೈಸ್ಪೀಡ್ ರೈಲುಗಳ ಜಾಲಬಂಧವನ್ನು ಸುಧಾರಣೆಗೊಳಿಸುವ ಯೋಜನೆಯಂತೆ ಗಂಟೆಗೆ 130 ಕಿ.ಮೀ. ಮತ್ತು ಹೆಚ್ಚಿನ ವೇಗದಲ್ಲಿ ಓಡುವ ಸಾಮರ್ಥ್ಯವುಳ್ಳ ಎಲ್ಲಾ ರೈಲುಗಳಿಗೆ ವಿಶೇಷ ಹವಾನಿಯಂತ್ರಿತ ಬೋಗಿಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ರೈಲ್ವೇ ಇಲಾಖೆ ರವಿವಾರ ತಿಳಿಸಿದೆ.

ಈ ನಿರ್ಧರಿತ ರೈಲುಗಳಲ್ಲಿ ಸ್ಲೀಪರ್ ಬೋಗಿಗಳು ಇರುವುದಿಲ್ಲ. ಆದರೆ ಗಂಟೆಗೆ 110 ಕಿ.ಮೀ ಮತ್ತು ಅದಕ್ಕಿಂತ ಕಡಿಮೆ ವೇಗದ ಎಲ್ಲಾ ರೈಲುಗಳು, ಎಕ್ಸ್‌ಪ್ರೆಸ್, ಮೈಲ್ ರೈಲುಗಳು ಈಗಿನಂತೆಯೇ ಸ್ಲೀಪರ್ ಕೋಚ್‌ಗಳನ್ನು ಹೊಂದಿರುತ್ತವೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಗಂಟೆಗೆ 130 ಕಿ.ಮೀ ಹಾಗೂ ಹೆಚ್ಚಿನ ವೇಗದಲ್ಲಿ ಓಡುವ ರೈಲು ಎಸಿ ಬೋಗಿಗಳನ್ನು ಹೊಂದಿರುವುದು ತಾಂತ್ರಿಕ ಅಗತ್ಯವಾಗಿದೆ. ಹೊಸ ಎಸಿ ಕೋಚ್‌ಗಳು ದುಬಾರಿಯಾಗಿರುವುದಿಲ್ಲ. ಉನ್ನತೀಕರಿಸಿದ ಎಸಿ ಕೋಚ್‌ಗಳಲ್ಲಿ ಸೌಲಭ್ಯ ಮತ್ತು ಸೌಕರ್ಯ ಹೆಚ್ಚಿದ್ದರೂ ಟಿಕೆಟ್ ದರ ಪ್ರಯಾಣಿಕರಿಗೆ ದುಬಾರಿಯಾಗಿರುವುದಿಲ್ಲ. ಅಲ್ಲದೆ ಪ್ರಯಾಣದ ಅವಧಿಯಲ್ಲೂ ಗಣನೀಯ ಪ್ರಮಾಣದ ಇಳಿಕೆಯಾಗಲಿದೆ ಎಂದು ರೈಲ್ವೇ ತಿಳಿಸಿದೆ.

ಸುವರ್ಣ ಚತುರ್ಭುಜ(ಗೋಲ್ಡನ್ ಕ್ವಾಡ್ರಿಲ್ಯಾಟರಲ್) ಮತ್ತು ಕರ್ಣರೇಖೆಯ ಹಳಿಗಳನ್ನು ಗಂಟೆಗೆ 130ರಿಂದ 160 ಕಿ.ಮೀ ವೇಗಕ್ಕೆ ಸರಿಹೊಂದುವಂತೆ ಉನ್ನತೀಕರಿಸಲಾಗಿದೆ. ಪ್ರಸ್ತುತ ಬಹುತೇಕ ಮೈಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಗಂಟೆಗೆ ಗರಿಷ್ಟ 110 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದರೆ, ರಾಜಧಾನಿ, ಶತಾಬ್ದಿ, ದುರಂತೋ ಮುಂತಾದ ರೈಲುಗಳು 120 ಕಿ.ಮೀ ವೇಗದಲ್ಲಿ ಸಂಚರಿಸಲು ಅವಕಾಶವಿದೆ ಎಂದು ರೈಲ್ವೇ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಕಪುರ್ತಲಾದ ರೈಲ್ವೇ ಕೋಚ್ ಫ್ಯಾಕ್ಟರಿಯಲ್ಲಿ ಹೊಸ ಎಸಿ ಕೋಚ್‌ನ ಪ್ರಯೋಗ ಮಾದರಿಯನ್ನು ತಯಾರಿಸಲಾಗಿದ್ದು ಕೆಲವೇ ದಿನಗಳಲ್ಲಿ ಹೊಸ ಕೋಚ್ ಸಿದ್ಧವಾಗಲಿದೆ. ಸ್ಲೀಪರ್ ಕೋಚ್‌ಗಳಲ್ಲಿ 72 ಬರ್ತ್‌ಗಳಿದ್ದರೆ ಹೊಸ ಎಸಿ ಕೋಚ್‌ಗಳಲ್ಲಿ 83 ಬರ್ತ್‌ಗಳಿರುತ್ತವೆ. ಸೈಡ್ ಅಪ್ಪರ್ ಮತ್ತು ಸೈಡ್ ಲೋವರ್ ಬರ್ತ್‌ಗಳಲ್ಲಿ ಮಧ್ಯದ ಬರ್ತ್‌ಗಳಿರುವುದಿಲ್ಲ. ಈ ವರ್ಷ 100 ಬೋಗಿಗಳನ್ನು ಮತ್ತು ಮುಂದಿನ ವರ್ಷ 200 ಬೋಗಿಗಳ ಉನ್ನತೀಕರಣಕ್ಕೆ ರೈಲ್ವೇ ಇಲಾಖೆ ಯೋಜನೆ ರೂಪಿಸಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News