ರಾಷ್ಟ್ರೀಯ ಶಿಕ್ಷಣ ನೀತಿ ಜಾಗತಿಕ ಮಾನದಂಡಕ್ಕೆ ಅನುಗುಣವಾಗಿದೆ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್

Update: 2020-10-11 17:28 GMT

 ಹೊಸದಿಲ್ಲಿ, ಅ.11: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಜಾಗತಿಕ ಮಾನದಂಡಕ್ಕೆ ಅನುಗುಣವಾಗಿದ್ದು ಮುಂದಿನ ದಿನಗಳಲ್ಲಿ ಭಾರತದ ವಿದ್ಯಾರ್ಥಿಗಳು ವಿದೇಶದಲ್ಲಿ ಶಿಕ್ಷಣ ಪಡೆಯಲು ದೊಡ್ಡ ಮೊತ್ತದ ಹಣವನ್ನು ವಿನಿಯೋಗಿಸುವ ಅಗತ್ಯವಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.

ಶನಿವಾರ ಐಐಟಿ ಖರಗ್‌ಪುರದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವೆಬಿನಾರ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಶಿಕ್ಷಣ ವ್ಯವಸ್ಥೆ ಸದೃಢವಾಗಿದ್ದು ಶ್ರೇಷ್ಠ ದರ್ಜೆಯ ಸಂಶೋಧನಾ ಸೌಲಭ್ಯಗಳನ್ನು ಹೊಂದಿದೆ. ನಮ್ಮ ವಿದ್ಯಾರ್ಥಿಗಳು ಸಾವಿರಾರು ಡಾಲರ್ ಮೊತ್ತವನ್ನು ವ್ಯಯಿಸಿ ವಿದೇಶದ ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾತಿ ಪಡೆಯುವ ಅಗತ್ಯವಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ 2020 ಶಿಕ್ಷಣ ವಲಯದ ಸುಧಾರಣೆಯ ಬಗ್ಗೆ ಮತ್ತಷ್ಟು ಗಮನ ಹರಿಸಿದೆ. ಇನ್ನು ಮುಂದೆ ನಮ್ಮ ವಿದ್ಯಾರ್ಥಿಗಳು ದೇಶದಲ್ಲೇ ನೆಲೆನಿಂತು ವಿಶ್ವದರ್ಜೆಯ ಶಿಕ್ಷಣ ಪಡೆಯಬಹುದಾಗಿದೆ ಎಂದು ಹೇಳಿದರು.

  ಭಾರತದಲ್ಲಿ ಕ್ಯಾಂಪಸ್ ತೆರೆಯುವಂತೆ ಹಲವು ವಿದೇಶಿ ವಿವಿಗಳನ್ನು ಆಹ್ವಾನಿಸಲಾಗಿದೆ. ಅಲ್ಲದೆ ಭಾರತೀಯ ವಿವಿಗಳು ವಿದೇಶದಲ್ಲಿ ಕ್ಯಾಂಪಸ್ ತೆರೆಯಲೂ ಪ್ರೋತ್ಸಾಹ ನೀಡಲಾಗುತ್ತಿದೆ. ನೂತನ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿರುವ ‘ಕ್ರೆಡಿಟ್ ಬ್ಯಾಂಕ್ ಸಿಸ್ಟಮ್’ ಜಾಗತಿಕ ಶಿಕ್ಷಣ ಪದ್ಧತಿಗೆ ಅನುಗುಣವಾಗಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಕ್ರಮಗಳಿಂದ ವಿರಾಮ ಪಡೆಯಲು ಕ್ರೆಡಿಟ್ ಬ್ಯಾಂಕ್ ಸಿಸ್ಟಮ್ ಅನುವು ಮಾಡುತ್ತದೆ. ಹಲವು ಶೈಕ್ಷಣಿಕ ಉಪಕ್ರಮಗಳಡಿ ಸರಕಾರ ಕಳೆದ 6 ವರ್ಷದಿಂದ ಆರಂಭಿಸಿರುವ ಡಿಜಿಟಲ್ ಶಿಕ್ಷಣ ವೇದಿಕೆಗಳು ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗಲಿವೆ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News