ಅಮೆರಿಕದ ಪಾಲ್ ಮಿಲ್‌ಗ್ರೋಮ್, ರಾಬರ್ಟ್ ವಿಲ್ಸನ್‌ಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ

Update: 2020-10-12 14:55 GMT
ಪಾಲ್ ಮಿಲ್‌ಗ್ರೋಮ್/ ರಾಬರ್ಟ್ ವಿಲ್ಸನ್ (Twitter (@NobelPrize))

ಸ್ಟಾಕ್‌ಹೋಂ, ಅ.12: ಹರಾಜು ಸಿದ್ಧಾಂತದ ಸುಧಾರಣೆ ಹಾಗೂ ಹೊಸ ಹರಾಜು ವಿಧಾನದ ಅನ್ವೇಷಣೆಗಾಗಿ ಅಮೆರಿಕದ ಅರ್ಥಶಾಸ್ತ್ರಜ್ಞರಾದ ಪೌಲ್ ಆರ್ ಮಿಲ್‌ಗ್ರೋಮ್ ಮತ್ತು ರಾಬರ್ಟ್ ಆರ್ ವಿಲ್ಸನ್ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈಯನ್ಸ್‌ನ ಪ್ರಧಾನ ಕಾರ್ಯದರ್ಶಿ ಗೊರಾನ್ ಹನ್ಸನ್ ಸೋಮವಾರ ಪ್ರಕಟಿಸಿದ್ದಾರೆ. ಪ್ರಶಸ್ತಿಯು 8.06 ಕೋಟಿ ರೂ. ನಗದು ಹಾಗೂ ಚಿನ್ನದ ಪದಕವನ್ನು ಹೊಂದಿರುತ್ತದೆ. ಸ್ಟಾನ್‌ಫೋರ್ಡ್ ವಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಇಬ್ಬರು ಅರ್ಥಶಾಸ್ತ್ರಜ್ಞರು, ರೇಡಿಯೋ ತರಂಗಾಂತರಗಳ ಮೂಲಕ ಸರಕಾರಗಳಿಗೆ ಹರಾಜು ಮಾರಾಟ ಮಾಡಲು ಸಾಧ್ಯವಾಗದ ಸರಕು ಮತ್ತು ಸೇವೆಗಳನ್ನು ಹರಾಜು ಮಾಡಬಹುದಾದ ನೂತನ ವಿಧಾನವನ್ನು ಅನ್ವೇಷಿಸಿದ್ದಾರೆ ಎಂದು ಸ್ವೀಡಿಷ್ ಅಕಾಡೆಮಿಯ ಹೇಳಿಕೆ ತಿಳಿಸಿದೆ.

ಮೂಲಭೂತ ಸಿದ್ದಾಂತದಿಂದ ತಮ್ಮ ಅನ್ವೇಷಣೆಯನ್ನು ಆರಂಭಿಸಿದ ಈ ಇಬ್ಬರು ಅರ್ಥಶಾಸ್ತ್ರಜ್ಞರು ಬಳಿಕ ಫಲಿತಾಂಶಗಳನ್ನು ಪ್ರಾಯೋಗಿಕ ಅನ್ವಯಿಕೆಗಳಲ್ಲಿ ಬಳಸಿದರು. ಜಾಗತಿಕವಾಗಿ ಈ ಆವಿಷ್ಕಾರ ಸಮಾಜಕ್ಕೆ ಹೆಚ್ಚಿನ ಪ್ರಯೋಜನ ನೀಡಲಿದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಪೀಟರ್ ಫ್ರೆಡ್ರಿಕ್ಸನ್ ಹೇಳಿದ್ದಾರೆ. ಕಲೆ(ಆರ್ಟ್), ಖನಿಜ, ಆನ್‌ಲೈನ್ ಜಾಹೀರಾತು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲು ಇದು ಸಹಾಯ ಮಾಡುತ್ತದೆ. ಖರೀದಿಯ ವಿಷಯಗಳು ಸಾಮಾನ್ಯ ಮೌಲ್ಯ ಹೊಂದಿರಬಹುದು(ಉದಾಹರಣೆ: ತೈಲ) ಅಥವಾ ಬಿಡ್ಡರ್‌ಗಳ ಆಯ್ಕೆಗೆ ಸಂಬಂಧಿಸಿದಂತೆ ಬದಲಾಗಬಹುದು(ಉದಾಹರಣೆ: ಕಲಾ ನೈಪುಣ್ಯದ ವಸ್ತುಗಳು). ವಸ್ತುವಿನ ಮೌಲ್ಯದ ಬಗ್ಗೆ ಬಿಡ್ಡರ್‌ಗಳಿಗೆ ತಿಳುವಳಿಕೆ ಇರಬಹುದು ಅಥವಾ ಇಲ್ಲದೆಯೂ ಇರಬಹುದು. ತೆರೆದ ಟೆಂಡರ್ ಅಥವಾ ಮುಚ್ಚಿದ ಟೆಂಡರ್ ಮೂಲಕ ಹರಾಜು ಪ್ರಕ್ರಿಯೆ ನಡೆಯಬಹುದು. ಹೀಗೆ ವಿವಿಧ ರೀತಿಯಲ್ಲಿ ನೂತನ ಆವಿಷ್ಕಾರದ ನೆರವು ಪಡೆಯಲು ಸಾಧ್ಯ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News