ಪ್ರೌಢಶಾಲೆ ಉಳಿಸಲು ವಿದ್ಯಾರ್ಥಿನಿಯಿಂದ ಪ್ರಧಾನಿಗೆ ಪತ್ರ
ಉಡುಪಿ, ಅ.12: ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ ಆಗುತ್ತಿರುವ ಹಿನ್ನೆಲೆ ಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಚ್ಚಲು ಆದೇಶಿಸಿದ್ದ ಗ್ರಾಮದ ಪ್ರೌಢ ಶಾಲೆಯನ್ನು ಉಳಿಸುವಂತೆ ವಿದ್ಯಾರ್ಥಿಯೊಬ್ಬಳು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, ಇದಕ್ಕೆ ಸ್ಪಂದಿಸಿರುವ ಕಾರ್ಯಾಲಯವು ಈ ಕುರಿತು ಕ್ರಮ ಜರಗಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ.
30 ವರ್ಷಗಳ ಹಿಂದೆ ಆರಂಭವಾದ ಹಿರಿಯಡ್ಕ ಪಂಚನಬೆಟ್ಟು ವಿದ್ಯಾ ವರ್ಧಕ ಅನುದಾನಿತ ಪ್ರೌಢಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷಿಣಿಸುತ್ತಿತ್ತು. ನಿಯಮದಂತೆ ಈ ಶಾಲೆಯ ಪ್ರತಿ ತರಗತಿಯಲ್ಲಿ ಕನಿಷ್ಠ 25 ಮಂದಿ ಮಕ್ಕಳ ಸಂಖ್ಯೆ ಇಲ್ಲದ ಕಾರಣ, ಇಲಾಖೆಯು ಈ ಶಾಲೆಯನ್ನು ಮುಚ್ಚಲು ನಿರ್ಧರಿಸಿತ್ತು. ಹಾಗೆ 2018ರ ಜುಲೈಯಲ್ಲಿ ಶಿಕ್ಷಣ ಇಲಾಖೆಯು ಶಾಲೆಯನ್ನು ಮುಚ್ಚಿ, ಸಮೀಪದ ಶಾಲೆಯೊಂದಿಗೆ ವಿಲೀನ ಮಾಡುವಂತೆ ಅಂತಿಮ ನೋಟಿಸ್ ಜಾರಿ ಮಾಡಿತ್ತು.
ಒಂದು ವರ್ಷ ವಿಸ್ತರಣೆ: ಪಂಚನಬೆಟ್ಟು ಗ್ರಾಮೀಣ ಪ್ರದೇಶದ ಇರುವ ಒಂದೇ ಒಂದು ಪ್ರೌಢಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಶಾಲಾ ಆಡಳಿತ ಕಮಿಟಿ ಇಲಾಖೆಗೆ ಮನವಿ ಮಾಡಿ ಒಂದು ವರ್ಷ ಅವಕಾಶ ಕೊಡುವಂತೆ ಕೇಳಿಕೊಂಡಿತು. ಆ ಮನವಿಯ ಹಿನ್ನೆಲೆಯಲ್ಲಿ ಈ ಶಾಲೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮತ್ತೆ ಒಂದು ವರ್ಷದ ಅವಧಿಗೆ ಮಾನ್ಯತೆ ನವೀಕರಿಸಲು ಅನುಮತಿ ನೀಡಿತು.
2019-20ನೆ ಸಾಲಿನಲ್ಲಿ 8ನೆ ತರಗತಿಯಲ್ಲಿ 21, 9ನೆ ತರಗತಿಯಲ್ಲಿ 12 ಮತ್ತು 10ನೆ ತರಗತಿಯಲ್ಲಿ 11 ಸೇರಿದಂತೆ ಒಟ್ಟು 44 ಮಕ್ಕಳಿದ್ದರು. 2019 -20ನೆ ಸಾಲಿನಲ್ಲಿಯೂ ಮಕ್ಕಳ ಸಂಖ್ಯೆ ಹೆಚ್ಚಾಗದ ಕಾರಣ ಇಲಾಖೆಯು ಶಾಲೆಯನ್ನು ಮುಚ್ಚಿ, ಅಲ್ಲಿನ ಶಿಕ್ಷಕರನ್ನು ಬೇರೆ ಬೇರೆ ಶಾಲೆಗಳಿಗೆ ನಿಯೋಜಿಸಿ ಆದೇಶ ನೀಡಿತು.
ಅದರಂತೆ ಆರು ಶಿಕ್ಷಕರ ಪೈಕಿ ಮೂವರು ಶಿಕ್ಷಕರು ಬೇರೆ ಶಾಲೆಗೆ ತೆರಳಿದ್ದರು. ಇದೀಗ ಶಾಲೆ ಮುಚ್ಚಲು ಮನಸ್ಸಿಲ್ಲದ ಆಡಳಿತ ಮಂಡಳಿ, 2020-21ನೆ ಸಾಲಿಗೂ ಮಕ್ಕಳ ದಾಖಲಾತಿಯನ್ನು ಮುಂದುವರೆಸಿದೆ. ಈಗ 8ನೆ ತರಗತಿ ಯಲ್ಲಿ 10, 9ನೆ ತರಗತಿಯಲ್ಲಿ 20 ಮತ್ತು 10ನೆ ತರಗತಿಯಲ್ಲಿ 10 ಸೇರಿದಂತೆ ಒಟ್ಟು 40 ಮಂದಿ ಮಕ್ಕಳು ದಾಖಲಾಗಿದ್ದಾರೆ.
ವಿದ್ಯಾರ್ಥಿನಿ ಪ್ರಯತ್ನಕ್ಕೆ ಫಲ: ಶಾಲಾ ಆಡಳಿತ ಮಂಡಳಿ ಶಾಲೆಯನ್ನು ಉಳಿಸಿಕೊಳ್ಳುವ ಪ್ರಯತ್ನದ ಮಧ್ಯೆ ಶಾಲಾ ವಿದ್ಯಾರ್ಥಿನಿಯಾಗಿದ್ದ ವರ್ಷಿತಾ ಆರ್.(15) ಪ್ರಧಾನ ಮಂತ್ರಿಗೆ ಬರೆದ ಪತ್ರಕ್ಕೆ ಸ್ಪಂದನೆ ದೊರೆತಿದೆ.
ಪಂಚನಬೆಟ್ಟುವಿನ ರವೀಂದ್ರ ಆಚಾರ್ಯ ಹಾಗೂ ವನಿತಾ ಆಚಾರ್ಯ ದಂಪತಿಯ ಪುತ್ರಿ ವರ್ಷಿತಾ, ಇದೇ ವರ್ಷ ಈ ಶಾಲೆಯಲ್ಲಿ ಎಸೆಸೆಲ್ಸಿ ಮುಗಿಸಿದ್ದಾರೆ. ಈಕೆಯ ತಂಗಿ ಇದೇ ಶಾಲೆಯಲ್ಲಿ 9ನೆ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಆದರೂ ಮುಚ್ಚುಗಡೆ ಹಂತದಲ್ಲಿರುವ ತಾನು ಕಲಿತ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ವರ್ಷಿತಾ, ಆ.29ರಂದು ಪ್ರಧಾನ ಮಂತ್ರಿ ಕಾರ್ಯಾ ಲಯಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಈ ಪತ್ರಕ್ಕೆ ಸ್ಪಂದಿಸಿರುವ ಪ್ರಧಾನ ಮಂತ್ರಿ ಕಾರ್ಯಾಲಯವು ಈ ಸಂಬಂಧ ಕ್ರಮ ತೆಗೆದುಕೊಂಡು ಉತ್ತರಿಸುವಂತೆ ಕರ್ನಾಟಕ ರಾಜ್ಯ ಮುಖ್ಯಕಾರ್ಯ ದರ್ಶಿಗೆ ಸೆ.14ರಂದು ಪತ್ರ ಬರೆದಿದೆ. ವಿದ್ಯಾರ್ಥಿನಿಯ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಆಕೆಯನ್ನು ಬೆಳದಿಂಗಳ ಸಾಹಿತ್ಯ ಸಮ್ಮೇಳನದ ವತಿ ಯಿಂದ ಸನ್ಮಾನಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆ ಸುತ್ತಮುತ್ತಲಿನ 15ಕಿ.ಮೀ. ವ್ಯಾಪ್ತಿಯ ಮಕ್ಕಳಿಗೆ ಅತಿಅಗತ್ಯವಾಗಿದೆ. ಈ ಪ್ರೌಢಶಾಲೆ ಮುಚ್ಚಿದರೆ ಮುಂದೆ 8ಕಿ.ಮೀ. ದೂರದ ಹಿರಿಯಡ್ಕ ಅಥವಾ ಬೈಲೂರಿಗೆ ಹೋಗಬೇಕಾಗುತ್ತದೆ. ಉತ್ತಮವಾದ ಈ ಶಾಲೆ ನಮ್ಮ ಗ್ರಾಮಕ್ಕೆ ಅನಿವಾರ್ಯ ಆಗಿದೆ. ಆದುದರಿಂದ ಇದನ್ನು ಉಳಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದೇನೆ.
-ವರ್ಷಿತಾ ಆರ್., ವಿದ್ಯಾರ್ಥಿನಿ
ಪಂಚನಬೆಟ್ಟು ಶಾಲೆಗೆ ಸಂಬಂಧಿಸಿ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಪತ್ರ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಲಾಖಾ ನಿಯಮದಷ್ಟು ಮಕ್ಕಳ ಸಂಖ್ಯೆ ಇಲ್ಲದ ಕಾರಣ 2018ರ ಜುಲೈ ತಿಂಗಳಲ್ಲಿ ಶಾಲೆ ಮುಚ್ಚುವಂತೆ ಅಂತಿಮ ನೋಟೀಸ್ ಜಾರಿ ಮಾಡಲಾಗಿತ್ತು. ನಂತರ ಮನವಿ ಮೇರೆಗೆ ಒಂದು ವರ್ಷ ಅವಕಾಶ ನೀಡಲಾಗಿತ್ತು.
-ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿ, ಉಡುಪಿ