ತುಂಬೆ- ಸಜೀಪನಡು ಸೇತುವೆ ಪ್ರಸ್ತಾವ ಸರಕಾರದ ಮುಂದಿದೆ: ಯು.ಟಿ.ಖಾದರ್
ಬಂಟ್ವಾಳ, ಅ.12: ತುಂಬೆ - ಸಜೀಪ ನಡು ಸಂಪರ್ಕ ಸೇತುವೆ ನಿರ್ಮಾಣದ ಪ್ರಸ್ತಾವ ಸರಕಾರದ ಮುಂದಿದ್ದು ಬಂಟ್ವಾಳ ತಾಲೂಕಿನ ಪುದು, ಮೇರೆಮಜಲು, ತುಂಬೆ ಗ್ರಾಮಗಳನ್ನು ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲು ಬಹಳ ಉಪಯುಕ್ತವಾಗುತ್ತದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಗಳ 16 ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಪಕೃತಿ ವಿಕೋಪದಡಿ ಉಂಟಾದ ನಷ್ಟದ 12 ಫಲಾನುಭವಿಗಳಿಗೆ ಒಟ್ಟು 35,2000 ರೂಪಾಯಿಯ ಚೆಕ್ ಅನ್ನು ವಿತರಿಸಿ ಅವರು ಮಾತನಾಡಿದರು.
ಅಡ್ಯಾರ್ - ಹರೇಕಳ ಸಂಪರ್ಕ ಸೇತುವೆ ಕಾಮಗಾರಿ ನಡೆಯುತ್ತಿದ್ದು ಶೀಘ್ರವಾಗಿ ಜನರ ಉಪಯೋಗಕ್ಕೆ ಮುಕ್ತವಾಗಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಎಲ್ಲಾ ಗ್ರಾಮದ ಜನರಿಗೆ ಕುಡಿಯುವ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಮುಖ್ಯ ರಸ್ತೆ ಹಾಗೂ ಒಳ ರಸ್ತೆಗಳ ಕೆಲಸ ಪ್ರಗತಿ ಯಲ್ಲಿದೆ ಎಂದು ಅವರು ಹೇಳಿದರು.
ಹಕ್ಕು ಪತ್ರ ಇಲ್ಲದ ಪ್ರತಿ ಕುಟುಂಬಕ್ಕೂ ಮುಂದಿನ ದಿನಗಳಲ್ಲಿ ಹಕ್ಕುಪತ್ರ ಹಂಚಲು ನಾವು ಸಿದ್ದರಿದ್ದೇವೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿ 3,500 ಅರ್ಜಿಗಳು ಸ್ವಿಕೃತವಾಗಿದ್ದು ಅದರಲ್ಲಿ 2,500ಕ್ಕೂ ಅಧಿಕ ಕುಟುಂಬಕ್ಕೆ ಹಕ್ಕು ಪತ್ರ ನೀಡಿದ ಸಂತೋಷ ಇದೆ. ಈ ತಿಂಗಳೊಳಗೆ ಎಲ್ಲಾ ಹಕ್ಕು ಪತ್ರ ನೀಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಹಕ್ಕು ಪತ್ರ ಸಿಗದೆ ಇರುವ ಕೆಲವೊಂದು ಕುಟುಂಬಗಳ ಬಗ್ಗೆ ಮಾಹಿತಿ ಪಡೆದು ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅವರಿಗೂ ಸಿಗುವ ಕೆಲಸ ಮಾಡುತ್ತೇನೆ. ಪ್ರಸಕ್ತ ಸಿಕ್ಕಿರುವ ಹಕ್ಕು ಪತ್ರಗಳ ರಕ್ಷಣೆ ಮಾಡಿ ಅದರ ಸದುಪಯೋಗ ಪಡೆದು ಕೊಳ್ಳುವಂತೆ ಅವರು ತಿಳಿಸಿದರು.
ತಾಲೂಕು ಪಂಚಾಪತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾತಿಪಳ್ಳ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ, ಪ್ರಮುಖರಾದ ಅಬ್ದುಲ್ ರಝಾಕ್, ಮುರಳಿ, ರಹಿಮಾನ್, ಇಕ್ಬಾಲ್, ಮಜೀದ್ ಪೇರಿಮಾರ್, ಕಂದಾಯ ನಿರೀಕ್ಷಕ ರಾಮಕಾಟಿಪಳ್ಳ, ಗ್ರಾಮ ಕರಣೀಕರಾದ ನವ್ಯ, ಪ್ರಕಾಶ್ ಮತ್ತಿಹಳ್ಳಿ, ಗ್ರಾಮ ಸಹಾಯಕ ಶೀತಲ್ ಹಾಗು ಇತರರು ಉಪಸ್ಥಿತರಿದ್ದರು.