ಲಡಾಖ್ ಬಿಕ್ಕಟ್ಟು: ಭಾರತ-ಚೀನಾ ನಡುವೆ ಏಳನೇ ಸುತ್ತಿನ ಮಿಲಿಟರಿ ಮಾತುಕತೆ

Update: 2020-10-12 17:58 GMT

ಹೊಸದಿಲ್ಲಿ,ಅ.12: ಪೂರ್ವ ಲಡಾಖ್‌ನ ಎಲ್ಲ ಸಂಘರ್ಷ ತಾಣಗಳಿಂದ ಸೇನೆಯನ್ನು ಹಿಂದೆಗೆದುಕೊಳ್ಳಲು ಮಾರ್ಗಸೂಚಿಯೊಂದನ್ನು ರೂಪಿಸುವ ಏಕೈಕ ಅಜೆಂಡಾದೊಂದಿಗೆ ಭಾರತ ಮತ್ತು ಚೀನಾ ಸೋಮವಾರ ಏಳನೇ ಸುತ್ತಿನ ಉನ್ನತ ಮಟ್ಟದ ಮಾತುಕತೆಗಳನ್ನು ನಡೆಸಿದವು.

ಗಡಿ ಬಿಕ್ಕಟ್ಟು ಈಗಾಗಲೇ ಆರನೇ ತಿಂಗಳನ್ನು ಪ್ರವೇಶಿಸಿದ್ದು,ಉಭಯ ದೇಶಗಳು ತಮ್ಮ ನಿಲುವುಗಳಿಗೆ ಅಂಟಿಕೊಂಡಿರುವುದರಿಂದ ಸದ್ಯೋಭವಿಷ್ಯದಲ್ಲಿ ಪರಿಹಾರ ದೊರೆಯುವ ಲಕ್ಷಣಗಳು ಕಂಡುಬರುತ್ತಿಲ್ಲ.

ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ ಭಾರತದ ಕಡೆಯಲ್ಲಿರುವ ಚುಷುಲ್‌ನಲ್ಲಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ಆರಂಭಗೊಂಡವು ಎಂದು ಅಧಿಕೃತ ಮೂಲಗಳು ತಿಳಿಸಿವೆ.  ಲೇಹ್‌ನಲ್ಲಿರುವ 14 ಕಾರ್ಪ್ಸ್‌ನ ಕಮಾಂಡರ್‌ ಲೆ.ಜ.ಹರಿಂದರ ಸಿಂಗ್ ನೇತೃತ್ವದ ಭಾರತೀಯ ನಿಯೋಗವು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಶ್ಯಾ) ನವೀನ್ ಶ್ರೀವಾಸ್ತವ ಅವರನ್ನೂ ಒಳಗೊಂಡಿತ್ತು.

ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ ಇಕ್ಕೆಲಗಳಲ್ಲಿ ಭಾರತ ಮತ್ತು ಚೀನಾ ಸುಮಾರು ಒಂದು ಲಕ್ಷ ಸೈನಿಕರನ್ನು ನಿಯೋಜಿಸಿವೆ.

ಚೀನಾ ಎಲ್ಲ ಸಂಘರ್ಷ ಸ್ಥಳಗಳಿಂದ ತನ್ನ ಸೈನಿಕರನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಬೇಕು ಮತ್ತು ಪೂರ್ವ ಲಡಾಖ್‌ನ ಎಲ್ಲ ಪ್ರದೇಶಗಳಲ್ಲಿ ಎಪ್ರಿಲ್‌ಗಿಂತ ಮೊದಲಿನ ಸ್ಥಿತಿಯನ್ನು ಮರುಸ್ಥಾಪಿಸಬೇಕು ಎಂದು ಭಾರತವು ಒತ್ತಡ ಹೇರಲಿದೆ ಎಂದು ಮಾತುಕತೆಗಳಿಗೆ ಮುನ್ನ ಅಧಿಕೃತ ಮೂಲಗಳು ತಿಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News