ಶೋಭಾ ಕರಂದ್ಲಾಜೆ ವಿರುದ್ಧ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಕಿಡಿ

Update: 2020-10-13 11:49 GMT

ಮಂಗಳೂರು, ಅ.13: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆಯ ವಿರುದ್ಧ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ನಾಯಕಿಯರು ಕಿಡಿಕಾರಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಮತ್ತು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಕಾಂಗ್ರೆಸ್ ಅಭ್ಯರ್ಥಿಯಾದ ಕುಸುಮಾ ತನ್ನ ದಿವಂಗತ ಪತಿಯ ಹೆಸರಿನಲ್ಲಿ ಮತ ಯಾಚಿಸಬಾರದು ಎಂದು ಹೇಳಿರುವುದು ಅಕ್ಷಮ್ಯ. ಅವರ ಈ ಹೇಳಿಕೆಯು ಭಾರತೀಯ ಸಂಸ್ಕೃತಿಗೆ ತದ್ವಿರುದ್ಧವಾಗಿದೆ. ಸಪ್ತಪದಿ ತುಳಿದವರಿಗೆ ಮಾತ್ರ ಪತಿಯ ಮಹತ್ವ ಗೊತ್ತಿರುತ್ತದೆ ಎಂದು ವ್ಯಂಗ್ಯವಾಡಿದರು.

ತನ್ನ ಕ್ಷೇತ್ರದ, ಜಿಲ್ಲೆಯ, ರಾಜ್ಯದ ಸಮಸ್ಯೆಯ ಬಗ್ಗೆ ಸಂಸತ್ತಿನಲ್ಲಿ ಮಾತನಾಡದ ಶೋಭಾ ಕರಂದ್ಲಾಜೆ ಕೇವಲ ಭಾವನಾತ್ಮಕ ವಿಚಾರಗಳಿಗೆ ಮಾತ್ರ ಪ್ರತಿಕ್ರಿಯೆ ನೀಡುವ ಮೂಲಕ ರಾಜಕಾರಣ ಮಾಡುತ್ತಾರೆ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಯಾರಿಗೂ ಶೋಭೆಯಾಗದು ಎಂದು ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೀಡಿದ ಹೇಳಿಕೆಯನ್ನು ಬಿಜೆಪಿಗರು ತಪ್ಪಾಗಿ ಅರ್ಥೈಸಿದ್ದಾರೆ. ಮಿಥುನ್ ರೈ ಯಾವತ್ತೂ ಜೋಗಿ ಸಮುದಾಯಕ್ಕೆ ಅವಮಾನ ಆಗುವಂತಹ ಹೇಳಿಕೆಯನ್ನು ನೀಡಿಲ್ಲ. ಅವರು ನೀಡಿದ ಹೇಳಿಕೆಯನ್ನು ಮುಂದಿಟ್ಟು ಬಿಜೆಪಿಗರು ರಾಜಕೀಯ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ನಾಯಕಿಯರಾದ ಪ್ರತಿಭಾ ಕುಳಾಯಿ, ನಮಿತಾ ಡಿ. ರಾವ್, ಶಶಿಕಲಾ ಪದ್ಮನಾಭ, ಮಂಜುಳಾ ನಾಯಕ್, ಶೋಭಾ ಕೇಶವ್, ಸುರೇಖಾ ಚಂದ್ರಹಾಸ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News