ಮಿಥುನ್ ರೈ ಹಿಂದುತ್ವದ ಬಗ್ಗೆ ಬಿಜೆಪಿಗರಿಗೇನು ಗೊತ್ತು: ದ.ಕ.ಜಿಲ್ಲಾ ಕಾಂಗ್ರೆಸ್ ಎಸ್ಸಿ-ಎಸ್ಟಿ ಘಟಕದ ನಾಯಕರ ಪ್ರಶ್ನೆ

Update: 2020-10-13 13:57 GMT

ಮಂಗಳೂರು, ಅ.13: ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ಹಿಂದುತ್ವದ ಬಗ್ಗೆ ಬಿಜೆಪಿಗರಿಗೆ ಏನು ಗೊತ್ತು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಎಸ್ಸಿ-ಎಸ್ಟಿ ಘಟಕದ ನಾಯಕರು ಪ್ರಶ್ನಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಶೇಖರ ಕುಕ್ಕೇಡಿ ಮತ್ತು ರಘುರಾಜ್ ಕದ್ರಿ ಅವರು ಮಿಥುನ್ ರೈ ನಿಜವಾದ ಹಿಂದೂ ನಾಯಕ. ಅವರು ಅನೇಕ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರಕ್ಕೆ ನೆರವು ನೀಡಿದ್ದಾರೆ. 150ಕ್ಕೂ ಅಧಿಕ ಗೋವುಗಳನ್ನು ದಾನ ಮಾಡಿದ್ದಾರೆ. ಹಾಗಾಗಿ ಮಿಥುನ್ ರೈಯ ಹಿಂದುತ್ವದ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ನೈತಿಕತೆ ಇಲ್ಲ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ದಲಿತ ಯುವತಿಯರ ಅತ್ಯಾಚಾರ, ಕೊಲೆಕೃತ್ಯಗಳು ನಡೆಯುತ್ತಲೇ ಇದೆ. ಅಲ್ಲಿನ ಮುಖ್ಯಮಂತ್ರಿಯ ವೈಫಲ್ಯದ ಬಗ್ಗೆ ಮಿಥುನ್ ರೈ ಮಾತನಾಡಿದ್ದಾರೆಯೇ ವಿನಃ ಯಾವುದೇ ಸಮುದಾಯವನ್ನು ಅವಮಾನಿಸುವ ಹೇಳಿಕೆ ನೀಡಿಲ್ಲ. ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್‌ರ ಮೇಲೆ ದೈಹಿಕ ಹಲ್ಲೆಯಾದಾಗಲೂ ಮಾತನಾಡದ ಬಿಜೆಪಿಗರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರ ಆಡಳಿತ ವೈಫಲ್ಯದ ವಿರುದ್ಧ ಧ್ವನಿ ಎತ್ತಿರುವುದಕ್ಕೆ ಅಪಸ್ವರ ಎತ್ತುವುದು ಯಾವ ನ್ಯಾಯ ಎಂದು ಕಿಡಿಕಾರಿದರು.

ಜಿಲ್ಲೆಯ ಬಿಜೆಪಿಗರಿಗೆ ದಲಿತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ದಲಿತರ ಮೇಲಾಗುವ ಅನ್ಯಾಯದ ವಿರುದ್ಧ ಮೊದಲು ಧ್ವನಿ ಎತ್ತಲಿ ಎಂದು ಆಗ್ರಹಿಸಿದ ಅವರು, ದೇಶದ 40 ಕೋಟಿ ದಲಿತರಿಗೆ ರಕ್ಷಣೆಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ದೇಶಾದ್ಯಂತ ದಲಿತರ ಮೇಲೆ ಅತ್ಯಾಚಾರ, ದೌರ್ಜನ್ಯ, ಕೊಲೆಯಾಗುತ್ತಿದೆ. ಅವುಗಳಲ್ಲಿ ಕೆಲವು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿದೆ ಎಂದು ವಿಷಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಜನೀಶ್ ಕಾಪಿಕಾಡ್, ರೋಹಿತ್ ಉಳ್ಳಾಲ್, ಹೊನ್ನಯ್ಯ, ಪ್ರೇಮನಾಥ ಬಲ್ಲಾಳ್‌ಬಾಗ್, ವಿಜಯಲಕ್ಷ್ಮಿ, ದಿನೇಶ್, ಪ್ರಭಾಕರ, ಚಂದ್ರಿಕಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News