ಮನಪಾ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಂಗಡನೆ: ಮನೆಗಳಿಗೆ ದಂಡಕ್ಕೆ ಮತ್ತೆ 1 ವಾರ ವಿನಾಯಿತಿ
ಮಂಗಳೂರು, ಅ.13: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆಗಳಿಂದ ಸಂಗ್ರಹಿಸಲಾಗುವ ಕಸವನ್ನು ಒಣ ಹಾಗೂ ಹಸಿ ಕಸವಾಗಿ ಪ್ರತ್ಯೇಕಿಸಿ ನೀಡಲು ಈಗಾಗಲೇ ಮಾಹಿತಿ ನೀಡಲಾಗುತ್ತಿದ್ದು, ದಂಡಕ್ಕೆ ಸಂಬಂಧಿಸಿ ಮತ್ತೆ ಒಂದು ವಾದ ವಿನಾಯಿತಿಯನ್ನು ಮನಪಾ ನೀಡಿದೆ.
ಈ ಬಗ್ಗೆ ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್ ಪ್ರಕಟನೆಯನ್ನು ನೀಡಿದ್ದು, ಈಗಾಗಲೇ ಅಪಾರ್ಟ್‌ಮೆಂಟ್ ಸೇರಿದಂತೆ ಇತರ ವಸತಿಯೇತರ ಕಸ ಸಂಗ್ರಹಕ್ಕೆ ಸಂಬಂಧಿಸಿ ವಿಂಗಡನೆ ಮಾಡದೆ ಕಸ ನೀಡುತ್ತಿರುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿಸಿರುವುದಾಗಿ ಹೇಳಿದ್ದಾರೆ.
ಪಾಲಿಕೆಯ ಎಲ್ಲಾ 60 ವಾರ್ಡ್‌ಗಳಲ್ಲಿ ಒಣ ಕಸ, ಹಸಿ ಕಸ ಹಾಗೂ ಸ್ಯಾನಿಟರಿ ಕಸವನ್ನು ಪ್ರತ್ಯೇಕಿಸಿ ಕಸ ಸಂಗ್ರಹಿಸುವ ವಾಹನಕ್ಕೆ ನೀಡಬೇಕಾಗಿದೆ. ಅದರಂತೆ ಶುಕ್ರವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಹಸಿ ಕಸ ಹಾಗೂ ಸ್ಯಾನಿಟರಿ ಕಸವನ್ನು ಸಂಗ್ರಹಿಸಲಾಗು್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಪ್ಲಾಸ್ಟಿಕ್ ಕವರ್ ಬಳಸುವಂತಿಲ್ಲ!
ಕಸವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕದೆ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ ಕಸದ ಬುಟ್ಟಿಯಲ್ಲಿ ಹಾಕಿ ವಾಹನಗಳಿಗೆ ನೀಡಬೇಕೆಂದು ಈ ಸಂದರ್ಭದಲ್ಲಿ ಮನಪಾ ಆಯುಕ್ತರು ಮನವಿ ಮಾಡಿದ್ದಾರೆ.
ನಗರದ ಎಲ್ಲಾ ಉದ್ದಿಮೆದಾರರು ತಮ್ಮ ಉದ್ದಿಮೆ ಸ್ಥಳದ ಮುಂಭಾಗದಲ್ಲಿ ಹಸಿರು ಬಣ್ಣದ ಬಿನ್ ಹಸಿ ತ್ಯಾಜ್ಯಕ್ಕೆ ಹಾಗೂ ನೀಲಿ ಬಣ್ಣದ ಬಿನ್ ಅನ್ನು ಒಣ ತ್ಯಾಜ್ಯ ಸಂಗ್ರಹಕ್ಕೆ ಕಡ್ಡಾಯವಾಗಿ ಇರಿಸಬೇಕು. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮತ್ತು ಮಾರಾಟ ಮಾಡುವಂತಿಲ್ಲ ಎಂಬ ನಾಮಫಲಕವನ್ನು ಕೂಡಾ ಅಳವಡಿಸತಕ್ಕದ್ದು. ತಪ್ಪಿದ್ದಲ್ಲಿ ಉದ್ದಿಮೆ ಪರವಾನಿಗೆ ರದ್ದುಗೊಳಿಸುವ ಅಥವಾ ನವೀಕರಣಗೊಳಿಸದಿರಲು ಅಥವಾ ತ್ಯಾಜ್ಯ ಸಂಗ್ರಹಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಘನತ್ಯಾಜ್ಯ ನಿರ್ವಹಣೆಯ ನಿಯಮಾವಳಿಗಳನ್ನು ನಿಗದಿತ ಕಾಲಮಿತಿಯಲ್ಲಿ ಸಂಪೂರ್ಣ ಅನುಷ್ಠಾನಗೊಳಿಸುವಲ್ಲಿ ವಿಲವಾಗಿರುವ ಬಗ್ಗೆ ನ್ಯಾಯಾಲಯವು ಮಂಗಳೂರು ಪಾಲಿಕೆಗೆ ಪ್ರಶ್ನಿಸಿರುವ ಬೆನ್ನಲ್ಲಿಯೇ ಪಾಲಿಕೆಯು ದಂಡ ಪ್ರಯೋಗಕ್ಕೆ ಮುಂದಾಗಿದೆ.
ಆರಂಭದಲ್ಲಿ ಅ.2ರಿಂದ ಎಲ್ಲಾ ವಾರ್ಡ್‌ಗಳಲ್ಲಿ ತ್ಯಾಜ್ಯವನ್ನು ಹಸಿ ಕಸ ಹಾಗೂ ಒಣ ಕಸವಾಗಿ ಪ್ರತ್ಯೇಕಿಸಿ ನೀಡಿದ್ದಲ್ಲಿ ದಂಡ ಹಾಕುವ ಎಚ್ಚರಿಕೆ ನೀಡಿದ್ದ ಮನಪಾ ಬಳಕ ಅನ್ನು ಅ. 15ರವರೆಗೆ ವಿಸ್ತರಿಸಿತ್ತು.
ಪಾಲಿಕೆ ವ್ಯಾಪ್ತಿಯಲ್ಲಿರುವ ಅಪಾರ್ಟ್‌ಮೆಂಟ್ ಅಸೋಸಿಯೇಶನ್, ವಿದ್ಯಾರ್ಥಿ ನಿಲಯ, ಶಿಕ್ಷಣ ಸಂಸ್ಥೆಗಳು, ಹೊಟೇಲ್ ಸಂಘ, ಬಾರ್ ಆ್ಯಂಡ್ ರೆಸ್ಟೋರೆಂಟ್ ಸಂಘ, ಕಲ್ಯಾಣ ಮಂಟಪಗಳ ಸಂಘ, ಕ್ಯಾಟರಿಂಗ್ ಸಂಘ, ವ್ಯಾಪಾರಿಗಳ ಸಂಘ, ಕೋಳಿ ಮಾರಾಟಗಾರರ ಸಂಘ, ಸಣ್ಣ ಕೈಗಾರಿಕೆಗಳ ಸಂಘ, ಬಿಲ್ಡರ್‌ಗಳ ಸಂಘ ಹಾಗೂ ಇತರ ಸಂಘದವರು ಪಾಲಿಸಬೇಕಾದ ನಿಯಮಗಳ ಬಗ್ಗೆ ಕಳೆದ ವರ್ಷವೇ ಮಂಗಳೂರು ಪಾಲಿಕೆ ಮಾಹಿತಿ ನೀಡಿತ್ತು. ತ್ಯಾಜ್ಯ ಸಂಸ್ಕರಣೆ ತಂತ್ರಜ್ಞಾನವನ್ನು ಹೊಂದಿರುವ ಸಂಸ್ಥೆಗಳನ್ನು ಕರೆದು ಪ್ರಾತ್ಯಕ್ಷಿಕೆ ಕೂಡ ಮಾಡಲಾಗಿತ್ತು. ಜತೆಗೆ ಎಲ್ಲಾ ಭಾರೀ ತ್ಯಾಜ್ಯ ಉತ್ಪಾದಕರು ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿತ್ತು.
ತ್ಯಾಜ್ಯಕ್ಕೆ ದಂಡ ಪ್ರಮಾಣ
ಮನೆ, ಬೀದಿ ಬದಿ ವ್ಯಾಪಾರಸ್ಥರು ತ್ಯಾಜ್ಯ ವಿಂಗಡಿಸದಿದ್ದಲ್ಲಿ 1500ರೂ. ನಿಂದ 5000 ರೂ.ವರೆಗೆ
ಭಾರೀ ತ್ಯಾಜ್ಯ ಉತ್ಪಾದಕರು ತ್ಯಾಜ್ಯ ವಿಂಗಡನೆ ಮಾಡದಿದ್ದಲ್ಲಿ 15,000ರೂ. ಗಳಿಂದ 25,000 ರೂ. ವರೆಗೆ,
ತೆರೆದ ಪ್ರದೇಶದಲ್ಲಿ ತ್ಯಾಜ್ಯ ಬಿಸಾಕಿದರೆ 1500ರೂ. ನಿಂದ 25,000ರೂ. ವರೆಗೆ,
ಬಯೋ ಮೆಡಿಕಲ್ ತ್ಯಾಜ್ಯ ಘನತ್ಯಾಜ್ಯದೊಂದಿಗೆ ಮಿಶ್ರಣಗೊಳಿಸಿದರೆ 10,000ರೂ. ನಿಂದ 25000ರೂ.ವರೆಗೆ,
ಕಟ್ಟಡ ಭಗ್ನಾವಶೇಷಗಳನ್ನು ತೆರೆದ ಪ್ರದೇಶದಲ್ಲಿ ಬಿಸಾಕಿದರೆ 25,000ರೂ.
ಕಸ ಪ್ರತ್ಯೇಕಿಸಿ ನೀಡುವ ಬಗ್ಗೆ ಪ್ರಸ್ತುತ ಜನರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ. ಈ ಬಗ್ಗೆ ಮನಪಾದಿಂದ ಜಾಗೃತಿ
ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಮನೆಗಳ ಕಸ ಸಂಗ್ರಹಕ್ಕೆ ಸಂಬಂಧಿಸಿ ದಂಡ ವಿಧಿಸುವ ಪ್ರಕ್ರಿಯೆಯನ್ನು ಒಂದು ವಾರದ ಕಾಲ ಮುಂದೂಡಲಾಗಿದೆ. ಉಳಿದಂತೆ ಅಪಾರ್ಟ್‌ಮೆಂಟ್ ಹಾಗೂ ಇತರ ವಾಣಿಜ್ಯ ಸಂಬಂಧಿ ಕಸ ಸಂಗ್ರಹದ ಸಂದರ್ಭ ನಿಯಮ ಉಲ್ಲಂಘಿಸುತ್ತಿದ್ದರೆ ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಕ್ಷಯ್ ಶ್ರೀಧರ್, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ.