ಇತಿಹಾಸ ಪ್ರಸಿದ್ಧ ಕೇಪು ದೇವಸ್ಥಾನದಿಂದ ಅರ್ಧ ಕೆಜಿಗೂ ಅಧಿಕ ಬೆಳ್ಳಿ ವಸ್ತು ಕಳವು

Update: 2020-10-13 13:16 GMT

ಬಂಟ್ವಾಳ, ಅ.13: ಇತಿಹಾಸ ಪ್ರಸಿದ್ಧ ಕಜಂಬು ಜಾತ್ರೆಗೆ ಹೆಸರುವಾಸಿಯಾಗಿರುವ ಕೇಪು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ದೇವಸ್ಥಾನದ ಗರ್ಭಗುಡಿಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯ ಹಣ ಹಾಗೂ ಬೆಳ್ಳಿಯ ವಸ್ತುವನ್ನು ದೋಚಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. 

ದೇವಾಲಯದ ಅರ್ಚಕರು ಬೆಳಗ್ಗೆ ದೇವಾಲಯಕ್ಕೆ ಬರುವ ಸಂದರ್ಭ ಗರ್ಭಗುಡಿಯ ಬಾಗಿಲುಗಳು ತೆರೆದೇ ಇದ್ದುದನ್ನು ಗಮನಿಸಿ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗರ್ಭಗುಡಿಯ ಹೊರಗೆ ಇದ್ದ ಕಾಣಿಗೆ ಹುಂಡಿಯನ್ನು ತುಂಡರಿಸಿದ್ದು ಅದರಲ್ಲಿ ಹೆಚ್ಚಿನ ನಗದು ಇರಲಿಲ್ಲ ಎನ್ನಲಾಗಿದೆ.

ಗರ್ಭ ಗುಡಿಯ ಒಳಗೆ ಇದ್ದ ಸುಮಾರು ಅರ್ಧ ಕೆಜಿಗೂ ಅಧಿಕ ತೂಕದ ಬೆಳ್ಳಿಯ ಸಾಮಾಗ್ರಿ ಹಾಗೂ ಎರಡು ಕಾಣಿಕೆ ಹುಂಡಿಯನ್ನು ತುಂಡರಿಸಿ ಸುಮಾರು 7.5 ಸಾವಿರ ನಗದು ದೂಚಿದ್ದಾರೆ. 

ಸ್ಥಳಕ್ಕೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ರೆಡ್ಡಿ ಹಾಗೂ ತಂಡ ಭೇಟಿ ನೀಡಿದ್ದು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿಟ್ಲ ಡೊಂಬ ಹೆಗಡೆ ಅರಸುಮನೆತನದ ಆಡಳಿತಕ್ಕೊಳಪಟ್ಟ ದೇವಾಲಯಗಳಲ್ಲಿ ಪ್ರಮುಖವಾದ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನ ವಿಶೇಷ ಕಾರ್ಣಿಕವನ್ನು ಹೊಂದಿದೆ. ಅರಸು ಆಳ್ವಿಕೆಯ ಸಮಯದಲ್ಲಿ ನಿಧಿ ಅಗೆಯಲು ಹೊರಟ 42 ವ್ಯಕ್ತಿಗಳಲ್ಲಿ 38 ಮಂದಿ ಕೇಪುವಿನಲ್ಲಿ ಮಾಯವಾಗಿ ಹೋಗಿದ್ದರು ಎಂಬ ಉಲ್ಲೇಖಗಳು ಇತಿಹಾಸದಲ್ಲಿದೆ. ಈಗ ಈ ದೇವಾಲಯದ ಗರ್ಭಗುಡಿಗೆ ಕಳ್ಳರು ನುಗ್ಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News