​ವಾಯುಭಾರ ಕುಸಿತ: ಕರಾವಳಿಯಲ್ಲಿ ಮಳೆ ಬಿರುಸು

Update: 2020-10-13 14:34 GMT

ಮಂಗಳೂರು, ಅ.13: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ಕರಾವಳಿಯಲ್ಲಿ ಮಂಗಳವಾರ ಬೆಳಗ್ಗಿನಿಂದ ನಿರಂತರ ಮಳೆ ಸುರಿದಿದ್ದು, ಮತ್ತಷ್ಟು ಬಿರುಸು ಪಡೆದಿದೆ.

ದ.ಕ. ಜಿಲ್ಲೆಯ ಬಂಟ್ವಾಳ ಸೇರಿದಂತೆ ಇತರೆಡೆಗಳಲ್ಲೂ ಗದ್ದೆಗಳಲ್ಲಿ ನೀರು ನಿಂತು ಕಟಾವಿಗೆ ಸಿದ್ಧವಾಗಿರುವ ಭತ್ತದ ಪೈರಿಗೆ ಮಳೆಯಿಂದ ಹಾನಿಯಾಗಿದೆ. ಘಟ್ಟದ ತಪ್ಪಲಿನ ಬೆಳ್ತಂಗಡಿ, ಸುಳ್ಯ, ಕಡಬ, ಸುಬ್ರಹ್ಮಣ್ಯ ಭಾಗದಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ಉತ್ತಮ ಮಳೆ ಸುರಿದಿದೆ. ಗಾಳಿಗೆ ಮರ, ಕೊಂಬೆಗಳು ಮುರಿದುಬಿದ್ದು ವಿವಿಧೆಡೆ ದಿನವಿಡೀ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಪುತ್ತೂರಿನಲ್ಲಿ ಮನೆಯೊಂದಕ್ಕೆ ಭಾಗಶಃ ಹಾನಿಯಾಗಿದೆ.

ಮಳೆ ಧಾರಾಕಾರ ಸುರಿದ ಪರಿಣಾಮ ನಗರದ ವಿವಿಧೆಡೆ ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ಪಡೀಲ್ ಸಮೀಪದ ರಸ್ತೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆನೀರು ಸಂಗ್ರಹಗೊಂಡಿದ್ದರಿಂದ ವಾಹನಗಳ ಸಂಚಾರದಲ್ಲಿ ಅಲ್ಪ ಮಟ್ಟಿಗೆ ಅಸ್ತವ್ಯಸ್ತಗೊಂಡಿತು. ವಾಹನಗಳು ವೇಗವಾಗಿ ಚಲಿಸುವ ವೇಳೆ ರಸ್ತೆ ಮೇಲಿನ ಮಳೆನೀರು ರಸ್ತೆಯ ಇಕ್ಕೆಲದತ್ತ ಚಿಮ್ಮುತ್ತಿರುವುದು ಮಳೆಗಾಲದ ಮನರಂಜನೆಯಂತೆ ಭಾಸವಾಗುತ್ತಿತ್ತು.

ಹಾನಿ ಸಂಭವಿಸಿಲ್ಲ: ನದಿಗಳಲ್ಲಿ ನೀರಿನ ಹರಿಯುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಮೂಲ್ಕಿ, ತಾಳಿಪಾಡಿ, ಕಲ್ಲಮುಂಡ್ಕೂರು ಭಾಗದಲ್ಲಿ ಭತ್ತದ ಗದ್ದೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ನಿಂತು ಬಳಿಕ ಕಡಿಮೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.

ಆರೆಂಜ್ ಅಲರ್ಟ್: ಬುಧವಾರವೂ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಮುಂದುವರಿಯಲಿದ್ದು, ಅಲ್ಲಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸುರಿಯುವ ಸಾಧ್ಯತೆಯಿದೆ. ಕರ್ನಾಟಕ ಕರಾವಳಿಗೆ ಸಂಬಂಧಿಸಿದಂತೆ ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರರು ಸಮುದ್ರಕ್ಕೆ ತೆರಳಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬೆಳಂದೂರಲ್ಲಿ ಅಧಿಕ ಮಳೆ: ಮಂಗಳವಾರ ಬೆಳಗ್ಗಿನಿಂದ ಸಾಯಂಕಾಲದ ವರೆಗಿನ ಮಳೆ ಮಾಹಿತಿಯಂತೆ ಪುತ್ತೂರಿನ ಬೆಳಂದೂರಿನಲ್ಲಿ ಅತ್ಯಧಿಕ 82.5ಮಿ.ಮೀ. ಮಳೆ ಸುರಿದಿದೆ. ಉಳಿದಂತೆ ಕಾಣಿಯೂರು 78, ಸುಳ್ಯದ ಉಬರಡ್ಕ ಮಿತ್ತಡ್ಕದಲ್ಲಿ 68 ಮಿ.ಮೀ. ಮಳೆ ಸುರಿದಿದೆ.

ಮಳೆ ವಿವರ
ಬಂಟ್ವಾಳ- 16.4 ಮಿ.ಮೀ.
ಬೆಳ್ತಂಗಡಿ- 28.2 ಮಿ.ಮೀ.
ಮಂಗಳೂರು- 19.5 ಮಿ.ಮೀ.
ಪುತ್ತೂರು- 21.1 ಮಿ.ಮೀ.
ಸುಳ್ಯ-27.5 ಮಿ.ಮೀ.
ಸರಾಸರಿ- 22 ಮಿ.ಮೀ.

ನದಿ ನೀರಿನ ಮಟ್ಟ
ನೇತ್ರಾವತಿ- 4 ಮೀಟರ್ (ಗರಿಷ್ಠ 8.5 ಮೀ.)
ಕುಮಾರಧಾರ- 14 ಮೀ. (ಗ. 26.5 ಮೀ.)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News