ದ.ಕ. ಜಿಲ್ಲೆಯಲ್ಲಿ ಹೊಸದಾಗಿ 314 ಮಂದಿಗೆ ಕೊರೋನ ಸೋಂಕು ದೃಢ

Update: 2020-10-13 15:00 GMT

ಮಂಗಳೂರು, ಅ.13: ದ.ಕ. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣದಲ್ಲಿ ಯಾವುದೇ ಇಳಿಕೆಯಾಗುತ್ತಿಲ್ಲ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ದಿನಂಪ್ರತಿಯ ಪರಿಶ್ರಮದ ನಡುವೆಯೂ ಸೋಂಕು ಹತೋಟಿಗೆ ಬರುವ ಲಕ್ಷಣ ಗೋಚರಿಸುತ್ತಿಲ್ಲ. ಅಂದಹಾಗೆ, ಜಿಲ್ಲೆಯಲ್ಲಿ ಇದುವರೆಗೆ 2,04,805 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಜಿಲ್ಲೆಯಲ್ಲಿ ಮಂಗಳವಾರ 314 ಮಂದಿಯಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಜೊತೆಗೆ ಕೋವಿಡ್‌ನಿಂದಾಗಿ ಮೂವರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 612ಕ್ಕೆ ಏರಿಕೆಯಾಗಿದೆ.

ಸೋಂಕಿತರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಇಲ್ಲಿವರೆಗೆ 27,146 ಮಂದಿಯಲ್ಲಿ ಸೋಂಕು ದೃಢಪಟ್ಟಂತಾಗಿದೆ. 486 ಮಂದಿ ಗುಣಮುಖರಾಗುವುದರ ಮೂಲಕ ಜಿಲ್ಲೆಯಲ್ಲಿ ಆಸ್ಪತ್ರೆ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಟ್ಟು 22,424 ಮಂದಿ ಕೊರೋನಮುಕ್ತರಾಗಿದ್ದಾರೆ.

ಇಲ್ಲಿಯವರೆಗೆ 2,04,805 ಮಂದಿ ಸ್ಯಾಂಪಲ್ ಪರೀಕ್ಷಿಸಲಾಗಿದ್ದು, ಇದರಲ್ಲಿ 1,77,659 ಮಂದಿಯ ವರದಿಯು ನೆಗೆಟಿವ್ ಬಂದಿದೆ. ಇನ್ನುಳಿದ 27,146 ಪಾಟಿಸಿವ್ ವರದಿಗಳಾಗಿವೆ. ಜಿಲ್ಲೆಯಲ್ಲಿ 4,110 ಸಕ್ರಿಯ ಪ್ರಕರಣಗಳಿವೆ.

7,219 ಕೇಸು ದಾಖಲು: ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ 7,219 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಮಾಸ್ಕ್ ಧರಿಸದೇ ಇದ್ದವರಿಗೆ ದಂಡ ಹಾಕಲಾಗಿದೆ. ಇಲ್ಲಿಯವರೆಗೆ 8.65 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಜನಸಾಮಾನ್ಯರಿಗೆ ಸೂಚಿಸಲಾಗಿದೆ. ಆದಾಗ್ಯೂ, ಮುಖಗವಸು ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ವ್ಯವಹರಿಸಿದಲ್ಲಿ ನಗರ ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ನಿಂದ ದಂಡ ವಸೂಲಿ ಮಾಡಲಾಗುವುದು ಎಂದು ಕೋವಿಡ್ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News