×
Ad

ದೇವಳದ ಆವರಣದಲ್ಲಿ ಹುಲಿವೇಷಕ್ಕೆ ಷರತ್ತುಬದ್ಧ ಅನುಮತಿ: ಧಾರ್ಮಿಕ ಪರಿಷತ್ ಸಭೆಯಲ್ಲಿ ದ.ಕ. ಡಿಸಿ ನಿರ್ಣಯ

Update: 2020-10-13 21:17 IST
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ

ಮಂಗಳೂರು, ಅ.13: ಕೋವಿಡ್ ಹಿನ್ನೆಲೆಯಲ್ಲಿ ಮುಂದಿನ ಮಂಗಳೂರು ದಸರಾದಲ್ಲಿ ಹುಲಿವೇಷಕ್ಕೆ ಷರತ್ತುಬದ್ಧ ಅನುಮತಿ ನೀಡಿ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ನಿರ್ಣಯ ಕೈಗೊಂಡಿದ್ದಾರೆ.

ದಸರಾ ಪ್ರಯುಕ್ತ ದೇವಸ್ಥಾನದ ಆವರಣದೊಳಗೆ ಮಾತ್ರ ಶ್ರದ್ಧಾಭಕ್ತಿಯಿಂದ ಗರಿಷ್ಠ 10 ಹುಲಿ ವೇಷಧಾರಿಗಳಿಗೆ ನಿಗದಿತ ಕಾಲಮಿತಿಯೊಳಗೆ ಹರಕೆ ಅರ್ಪಿಸಲು ಮಾತ್ರ ಷರತ್ತುಬದ್ಧ ಅನುಮತಿ ನೀಡಲಾಗಿದೆ.

ಹರಕೆ ಸಲ್ಲಿಸುವಾಗ ಕಡ್ಡಾಯವಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಝರ್ ಬಳಸುವಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ದೇವಸ್ಥಾನ ಆಡಳಿತ ಮಂಡಳಿಯದ್ದೇ ಜವಾಬ್ದಾರಿಯಾಗಿರುತ್ತದೆ. ಯಾವುದೇ ಮಾರ್ಗಸೂಚಿಗಳ ಉಲ್ಲಂಘನೆಯಾದಲ್ಲಿ ಮತ್ತು ಅಹಿತಕರ ಘಟನೆ ಸಂಭವಿಸಿದ್ದಲ್ಲಿ ದೇವಳದ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಹುಲಿವೇಷಧಾರಿಗಳು ದೇವಸ್ಥಾನದ ಹೊರಗೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಹುಲಿವೇಷ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲಾಗಿದೆ. ಪಟಾಕಿ ಹಾಗೂ ಸುಡುಮದ್ದು ಸಂಪೂರ್ಣವಾಗಿ ನಿಷೇಧಿಸಿರುವುದಾಗಿಯೂ ಸಭೆ ನಿರ್ಧರಿಸಿತು.

ವರ್ಚುವಲ್‌ನಲ್ಲಿ ಡಿಸಿ ಹಾಜರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಧಾರ್ಮಿಕ ಪರಿಷತ್‌ನ ಆರನೇ ಸಭೆಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯರು, ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಕೆ.ಸೂರ್ಯ ಕಷೆಕೋಡಿ, ಸೂರ್ಯನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಲ್ಲಿ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಅವರು ವರ್ಚುವಲ್ (ವೀಡಿಯೊ) ಮೂಲಕ ಸಭೆಯಲ್ಲಿ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News