ಕೊರೋನದ ಜತೆಗೆ ಸಾಂಕ್ರಾಮಿಕ ಸೋಂಕುಗಳ ನಿಯಂತ್ರಣ: ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

Update: 2020-10-13 16:11 GMT

ಹೊಸದಿಲ್ಲಿ, ಅ.13: ಕೊರೋನ ಸೋಂಕಿನ ಜೊತೆಗೇ ಸಹಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವೈದ್ಯರು ವರದಿ ನೀಡಿದ ಹಿನ್ನೆಲೆಯಲ್ಲಿ, ಋತು ಸಂಬಂಧಿ ಸಾಂಕ್ರಾಮಿಕ ಸೋಂಕುಗಳ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

ಡೆಂಗಿ, ಮಲೇರಿಯಾ, ಎಚ್1ಎನ್1, ಇಲಿಜ್ವರ, ಚಿಕುನ್‌ಗುನ್ಯಾ, ಟೈಫಾಯ್ಡ್ ಮುಂತಾದ ಋತುಕಾಲಿಕ ಸೋಂಕಿನಿಂದ ಸಂಭವಿಸುವ ಕಾಯಿಲೆಗಳು ದೇಶದಲ್ಲಿ ಪ್ರತೀ ವರ್ಷ ಕಾಣಿಸಿಕೊಳ್ಳುತ್ತದೆ. ಇದೀಗ ಕೊರೋನ ಸೋಂಕಿನೊಂದಿಗೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವುದು ಹೊಸ ಸವಾಲನ್ನು ಹುಟ್ಟುಹಾಕಿದ್ದು ಜ್ವರವನ್ನು ಹೊರತುಪಡಿಸಿ, ರೋಗಿಗಳು ಕೊರೋನವನ್ನು ಅನುಕರಿಸುವ ಇತರ ರೋಗಲಕ್ಷಣಗಳನ್ನು ತೋರುವುದರಿಂದ ರೋಗನಿರ್ಣಯ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ, ವಿಶ್ವ ಆರೋಗ್ಯ ಸಂಘಟನೆಯಂತಹ ಅಂತರ್ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ರೂಪಿಸಿರುವ ಮಾನದಂಡದ ಆಧಾರದಲ್ಲಿ ಮಾರ್ಗಸೂಚಿಯನ್ನು ಸಿದ್ಧಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ.

ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಈ ಸಾಂಕ್ರಾಮಿಕ ರೋಗಗಳ ಸೂಚನೆ ಮುಂಗಾರು ಅವಧಿ ಮತ್ತು ಮುಂಗಾರು ಬಳಿಕದ ಅವಧಿಯಲ್ಲಿ ಕಾಣಿಸಿಕೊಳ್ಳಬಹುದು. ಕೊರೋನ ಸೋಂಕಿನ ಸಾಧಾರಣ ಅಥವಾ ಗಂಭೀರ ಲಕ್ಷಣಗಳಿರುವ ಮತ್ತು ಚಿಕಿತ್ಸೆಗೆ ಸ್ಪಂದಿಸದಿರುವ ಪ್ರಕರಣಗಳಲ್ಲಿ ಬ್ಯಾಕ್ಟೀರಿಯಾದ ಸಹ ಸೋಂಕಿನ ಲಕ್ಷಣಗಳಿರುವ ಸಾಧ್ಯತೆಯಿದೆ. ಮಲೇರಿಯಾ/ಡೆಂಗಿ ಸೋಂಕುರೋಗ ದೃಢಪಟ್ಟವರಲ್ಲಿ ಕೊರೋನ ಸೋಂಕಿನ ಲಕ್ಷಣ ಕಾಣಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಲ್ಲದೆ, ಮುಂಗಾರು ಮತ್ತು ಮುಂಗಾರು ನಂತರದ ಅವಧಿಯಲ್ಲಿ, ಜ್ವರದ ಲಕ್ಷಣವನ್ನು ಕೊರೋನ ಎಂದು ರೋಗನಿರ್ಣಯ ಮಾಡಿದ್ದರೂ, ಈ ರೋಗಿಗೆ ಮಲೇರಿಯಾ ಅಥವಾ ಡೆಂಗಿ ಸೋಂಕು ಬಾಧಿಸಿರುವ ಅನುಮಾನವಿರುತ್ತದೆ. ಮೇಲೆ ತಿಳಿಸಿದ ಸಹಸೋಂಕುಗಳ ಸಾಧ್ಯತೆಗಳ ಹೊರತಾಗಿಯೂ, ಕೋವಿಡ್-19 ರೋಗನಿರ್ಣಯ ಮತ್ತು ಚಿಕಿತ್ಸೆ ಪ್ರಕ್ರಿಯೆ ಈ ಹಿಂದಿನಂತೆಯೇ ಇರಲಿದೆ.

ಪರೀಕ್ಷಾ ನಿಯಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಐಸಿಎಂಆರ್ ಸೂಚಿಸಿರುವ ಮಾರ್ಗಸೂಚಿಯನ್ನು ಪಾಲಿಸಬೇಕು. ಜೊತೆಗೆ, ಸಹಸೋಂಕಿನ ಬಗ್ಗೆ ಅನುಮಾನ ಮೂಡಿದರೆ, ಹೆಚ್ಚಿನ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಮಾರ್ಗಸೂಚಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News