ಆಂಧ್ರ: ಬೆಂಕಿ ಹಚ್ಚಿದ ದುಷ್ಕರ್ಮಿಯನ್ನು ಹಿಡಿದಿಟ್ಟುಕೊಂಡ ಮಹಿಳೆ; ಇಬ್ಬರೂ ಮೃತ್ಯು

Update: 2020-10-13 16:16 GMT

ಅಮರಾವತಿ, ಅ.13: ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಬೆಂಕಿ ಹಚ್ಚಿದ ವ್ಯಕ್ತಿಯನ್ನು ಮಹಿಳೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡ ಕಾರಣ ಆತನೂ ಸುಟ್ಟ ಗಾಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

24 ವರ್ಷದ ಮಹಿಳೆ ಹಾಗೂ ಆರೋಪಿ 4 ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಸ್ನೇಹ ಸಂಬಂಧವನ್ನು ಮುಂದುವರಿಸದಿರಲು ನಿರ್ಧರಿಸಿರುವುದಾಗಿ ಕೆಲ ತಿಂಗಳ ಹಿಂದೆ ಮಹಿಳೆ ಸ್ಪಷ್ಟಪಡಿಸಿದ್ದಳು. ಆದರೆ ಇದನ್ನು ಒಪ್ಪದ ಆ ವ್ಯಕ್ತಿ ಮಹಿಳೆಯನ್ನು ನಿರಂತರ ಹಿಂಬಾಲಿಸಿ ಪೀಡಿಸುತ್ತಿದ್ದ . ಇದರಿಂದ ರೋಸಿಹೋಗಿದ್ದ ಮಹಿಳೆ ಅಕ್ಟೋಬರ್ 5ರಂದು ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆತನನ್ನು ಠಾಣೆಗೆ ಕರೆಸಿಕೊಂಡು ಎಚ್ಚರಿಕೆ ನೀಡಿದ್ದ ಪೊಲೀಸರು, ಮುಂದೆ ಆ ಮಹಿಳೆಗೆ ತೊಂದರೆ ನೀಡುವುದಿಲ್ಲ ಎಂದು ಆತನಿಂದ ಮುಚ್ಚಳಿಕೆ ಬರೆಸಿಕೊಂಡಿದ್ದರು.

ಆ ಬಳಿಕ ಮಹಿಳೆ ತನ್ನ ದೂರನ್ನು ವಾಪಾಸು ಪಡೆದಿದ್ದಳು. ಅಕ್ಟೋಬರ್ 12ರಂದು ರಾತ್ರಿ ಕರ್ತವ್ಯ ಮುಗಿಸಿ ತನ್ನ ಬಾಡಿಗೆ ಕೋಣೆಗೆ ಮರಳುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಆ ವ್ಯಕ್ತಿ, ಪೊಲೀಸರಲ್ಲಿ ದೂರು ನೀಡಿದ ವಿಚಾರದಲ್ಲಿ ವಾಗ್ವಾದ ನಡೆಸಿದ್ದ. ಈ ಹಂತದಲ್ಲಿ ಬಾಟಲಿಯಲ್ಲಿ ತಂದಿದ್ದ ಪೆಟ್ರೋಲನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದ. ಆದರೆ ಮಹಿಳೆ ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಆತನನ್ನೂ ಬೆಂಕಿಯ ಬಲೆಯಲ್ಲಿ ಕೆಡವಿದ್ದಾಳೆ. ಇಬ್ಬರ ಅರಚಾಟ ಕೇಳಿ ಸಮೀಪದಲ್ಲಿದ್ದವರು ಧಾವಿಸಿ ಬಂದು ಬೆಂಕಿ ನಂದಿಸಿದ್ದಾರೆ. ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, 80 ಶೇ. ಸುಟ್ಟ ಗಾಯವಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತನಾಗಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತ ಎಂ. ರಮೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News