×
Ad

ನಿಂತಲ್ಲೇ ಭರ್ಜರಿ ಸಂಪಾದನೆ ಮಾಡುತ್ತಿದೆ ಸಿಂಗಾಪುರ ಏರ್ ಲೈನ್ಸ್ ವಿಮಾನ!

Update: 2020-10-13 21:53 IST

ಸಿಂಗಾಪುರ: ಕೊರೋನ ವೈರಸ್ ನಿಂದ ಸಂಕಷ್ಟದಲ್ಲಿರುವ ಸಿಂಗಾಪುರ ವಿಮಾನ ಯಾನ ಸಂಸ್ಥೆ ಚಾಂಗಿ ವಿಮಾನ ನಿಲ್ದಾಣದಲ್ಲಿ ಪಾರ್ಕ್ ಮಾಡಲಾಗಿರುವ ವಿಮಾನದೊಳಗೆ ಭೋಜನ ಸವಿಯುವ ವ್ಯವಸ್ಥೆ ಮಾಡುವ ಮೂಲಕ ಭರ್ಜರಿ ಸಂಪಾದನೆಗೆ ಇಳಿದಿದೆ. ಎ 380 ಜಂಬೋ ವಿಮಾನದೊಳಗೆ ಕೇವಲ ಊಟ ಮಾಡಲು ನೂರಾರು ಪ್ರಯಾಣಿಕರು ಬಜೆಟ್ ಟಿಕೆಟ್ ಗೆ ಸಮನಾಗಿರುವ ದರವನ್ನು 642 ಸಿಂಗಾಪುರ ಡಾಲರ್(470 ಯುಎಸ್ ಡಾಲರ್) ಪಾವತಿಸುತ್ತಿದ್ದಾರೆ.

ಕೊರೋನ ಸಾಂಕ್ರಾಮಿಕ ರೋಗದಿಂದಾಗಿ ವಾಯುಯಾನ ಉದ್ಯಮವು ತೀವ್ರ ಬಿಕ್ಕಟ್ಟಿನಲ್ಲಿರುವುದರಿಂದ ವಿಮಾನಯಾನ ಸಂಸ್ಥೆಗಳು ಪರ್ಯಾಯ ಮಾರ್ಗಗಳತ್ತ ಮುಖ ಮಾಡಿವೆ. ಸಿಂಗಾಪುರ ಏರ್ ಲೈನ್ಸ್ ಸಾವಿರಾರು ಉದ್ಯೋಗಗಳನ್ನು ಕಡಿತ ಮಾಡಿದ್ದು, ವಿಮಾನಗಳೆಲ್ಲವೂ ಹಾರಾಟ ನಡೆಸದೇ ನಿಂತು ಕೊಂಡಿವೆ. ಹೀಗಾಗಿ ಮತ್ತೊಂದು ಮಾರ್ಗವನ್ನು ಹುಡುಕಲು ಪ್ರಯತ್ನಿಸಿದೆ.

ಸಿಂಗಾಪುರ ಏರ್ ಲೈನ್ಸ್ ವಿಶ್ವದ ಅತ್ಯಂತ ದೊಡ್ಡ ಪ್ರಯಾಣಿಕ ವಿಮಾನ ಎ 380ರಲ್ಲಿ ಒಂದನ್ನು ಪಾಪ್ ಅಪ್ ರೆಸ್ಟೊರೆಂಟ್ ಆಗಿ ಪರಿವರ್ತಿಸಿದೆ. ಹಸಿವಿನಿಂದ ಬಳಲುತ್ತಿರುವ ಪ್ರಯಾಣಿಕರಿಗೆ ಊಟ ಮಾಡುವ ಅವಕಾಶವನ್ನು ಕಲ್ಪಿಸಿದೆ.ವಿಮಾನದೊಳಗೆ ಆಹಾರವನ್ನು ಸೇವಿಸುವ ಅವಕಾಶವು ಆಶ್ಚರ್ಯಕರವಾಗಿ ಜನಪ್ರಿಯವಾಗಿದೆ. ಅಕ್ಟೋಬರ್ 24 ಹಾಗೂ 25 ರಂದು ಊಟಕ್ಕಾಗಿ ಎಲ್ಲ 900 ಆಸನಗಳು ಸೋಮವಾರ ಬುಕ್ಕಿಂಗ್ ಆರಂಭವಾದ ಅರ್ಧ ತಾಸಿನೊಳಗೆ ಮಾರಾಟವಾಗಿವೆ ಎಂದು 'ಸ್ಟೇಟ್ಸ್ ಟೈಮ್ಸ್' ಪತ್ರಿಕೆ ವರದಿ ಮಾಡಿದೆ.

ಅಗಾಧವಾದ ಬೇಡಿಕೆಯ ಕಾರಣಕ್ಕೆ ಏರ್ ಲೈನ್ಸ್  ಹೆಚ್ಚುವರಿ ಎರಡು ದಿನಗಳಕಾಲ ರೆಸ್ಟೋರೆಂಟ್ ಗಳನ್ನು ತೆರೆಯುವುದಾಗಿ ಘೋಷಿಸಿದೆ. ಈಗ ಎಲ್ಲ ನಾಲ್ಕು ದಿನಗಳಲ್ಲಿ ಲಂಚ್ ಹಾಗೂ ಡಿನ್ನರ್ ನೀಡಲಾಗುತ್ತಿದೆ.

ಸುರಕ್ಷಿತ ಅಂತರದ ಮಾರ್ಗ ಸೂಚಿಗಳಿಗೆ ಅನುಗುಣವಾಗಿ ಚಾಂಗಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿರುವ ಡಬಲ್ ಡೆಕ್ಕರ್ ವಿಮಾನಗಳಲ್ಲಿ ಅರ್ಧ ದಷ್ಟು ಆಸನಗಳನ್ನು ಖಾಲಿ ಬಿಡಲಾಗುತ್ತದೆ. ವಿಮಾನ ಯಾನ ಅನುಭವವನ್ನು ತಮ್ಮ ವಾಸದ ಕೋಣೆಗೆ ತರಲು ಬಯಸುವವರಿಗೆ ಸಿಂಗಾಪುರ ಏರ್ ಲೈನ್ಸ್ ವಿಮಾನದ ಊಟವನ್ನು ಮನೆಗೆ ತಲುಪಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News