ಕೃಷಿ ಹೆಸರಿನಲ್ಲಿ ಸಾಲ: ನಿರ್ದೇಶಕರು, ವ್ಯವಸ್ಥಾಪಕಿ ವಿರುದ್ಧ ಪ್ರಕರಣ
ಉಡುಪಿ, ಅ.13: ಕೃಷಿಕರ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಸಾಲ ಪಡೆದು, ಅದರ ಸಬ್ಸಿಡಿ ಹಣವನ್ನು ಸ್ವಂತಕ್ಕೆ ಬಳಸಿ ಬ್ಯಾಂಕಿಗೆ ಮೋಸ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃಧ್ದಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಮತ್ತು ಹಿಂದಿನ ಅಧ್ಯಕ್ಷ ಕಿಶನ್ ಹೆಗ್ಡೆ ಎಂಬವರು ಕೃಷಿಕರಲ್ಲದಿದ್ದರೂ ಬ್ಯಾಂಕಿನಲ್ಲಿ ಸರಿಯಾದ ದಾಖಲೆಗಳನ್ನು ನೀಡದೆ ಸಾಲ ಪಡೆದು, ಅದರ ಸಬ್ಸಿಡಿ ಹಣವನ್ನು ಸ್ವಂತಕ್ಕೆ ಪಡೆದು ಬ್ಯಾಂಕಿಗೆ ಮೋಸ ಮಾಡಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕಿ ಉಷಾ ಕೆ. ಬ್ಯಾಂಕಿಗೆ ಮೋಸ ಹಾಗೂ ವಂಚನೆ ಮಾಡುವ ಉದ್ದೇಶದಿಂದ ಆಡಳಿತ ಮಂಡಳಿಯ ಅನುಮತಿ ಪಡೆ ಯದೆ, ಬ್ಯಾಂಕಿನಿಂದ ಸಾಲ ಪಡೆಯಲು ಕಿಶನ್ ಹೆಗ್ಡೆಗೆ ಸಹಕರಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಸದಾಶಿವ ಕರ್ಕೇರಾ ದೂರಿನಲ್ಲಿ ತಿಳಿಸಿದ್ದಾರೆ.
ಸಾಲ ಪಡೆಯುವ ಸಂದರ್ಭ ಯಾವುದೆ ಸರಿಯಾಗಿ ಕ್ರಮವನ್ನು ಅನುಸರಿಸದೆ ಆರೋಪಿಗಳಿಬ್ಬರು 2001ರ ಸೆ.27ರಿಂದ 2018ರ ಜ.20 ಮಧ್ಯ ಅವಧಿಯಲ್ಲಿ ಬ್ಯಾಂಕ್ಗೆ ಸುಮಾರು 20,67,531ರೂ. ಮೋಸ ಮತ್ತು ವಂಚನೆ ಮಾಡಿರುವು ದಾಗಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ವರದಿ ನೀಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.