×
Ad

ಕೇಂದ್ರ ಕೃಷಿ ಸಚಿವರ ಗೈರು: ಸಭೆಯಿಂದ ಹೊರ ನಡೆದ ರೈತ ಸಂಘಟನೆಗಳು

Update: 2020-10-14 14:54 IST

ಹೊಸದಿಲ್ಲಿ, ಅ. 14: ವಿವಾದಾತ್ಮಕ ಕೃಷಿ ಕಾಯ್ದೆಗೆ ಸಂಬಂಧಿಸಿ ಪಂಜಾಬ್‌ನ ಪ್ರತಿಭಟನಾ ನಿರತ ರೈತರು ಹಾಗೂ ಸರಕಾರದ ನಡುವಿನ ಮಾತುಕತೆ ಕೇಂದ್ರ ಕೃಷಿ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಅನುಪಸ್ಥಿತಿಯಿಂದ ಬುಧವಾರ ಇದ್ದಕ್ಕಿದ್ದಂತೆ ಅಂತ್ಯಗೊಂಡಿತು. ಸಚಿವ ನರೇಂದ್ರ ಸಿಂಗ್ ತೋಮರ್ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ರೈತರು ಸಭೆ ಬಹಿಷ್ಕರಿಸಿ ಹೊರ ನಡೆದರು.

 ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಕೇಂದ್ರ ಸರಕಾರ ಮನವಿ ಮಾಡಿತ್ತು. ಅಂತಿಮವಾಗಿ ರೈತರ ಸಂಘಟನೆಗಳು ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ನಿರ್ಧರಿಸಿದ್ದವು.

ಸಭೆಯಲ್ಲಿ ಕೃಷಿ ಖಾತೆಯ ಕಾರ್ಯದರ್ಶಿ ಪಾಲ್ಗೊಂಡಿದ್ದರು. ಆದರೆ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಪಾಲ್ಗೊಳ್ಳುವಂತೆ ಅವರು ಆಗ್ರಹಿಸಿದರು.

 ಸಭೆಯಲ್ಲಿ ನರೇಂದ್ರ ಸಿಂಗ್ ತೋಮರ್ ಅವರು ಪಾಲ್ಗೊಳ್ಳದೇ ಇರುವುದರಿಂದ ಅಸಮಾಧಾನಗೊಂಡ ರೈತರು ಸಚಿವಾಲಯದ ಒಳಗೆ ಘೋಷಣೆಗಳನ್ನು ಕೂಗಿದರು. ವಿವಾದಾತ್ಮಕ ಕೃಷಿ ಕಾಯ್ದೆಯ ಪ್ರತಿಗಳನ್ನು ಹರಿದು ಹಾಕಿದರು. ಅಲ್ಲದೆ, ವಿವಾದಾತ್ಮಕ ಕಾಯ್ದೆ ವಿರುದ್ಧ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿ ಸಭೆ ಬಹಿಷ್ಕರಿಸಿದರು.

‘‘ಚರ್ಚೆಯಿಂದ ನಮಗೆ ತೃಪ್ತಿ ಆಗಿಲ್ಲ. ಆದುದರಿಂದ ನಾವು ಸಭೆ ಬಹಿಷ್ಕರಿಸಿದೆವು. ಈ ಕಪ್ಪು ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ನಾವು ಬಯಸುತ್ತೇವೆ. ನಮ್ಮ ಬೇಡಿಕೆಯನ್ನು ಸಚಿವರಿಗೆ ತಿಳಿಸಲಾಗುವುದು ಎಂದು ಕಾರ್ಯದರ್ಶಿ ಅವರು ಹೇಳಿದ್ದಾರೆ’’ ಎಂದು ರೈತರ ಒಕ್ಕೂಟ ತಿಳಿಸಿದೆ.

‘‘ಸಭೆಯಲ್ಲಿ ಯಾರೊಬ್ಬ ಸಚಿವರೂ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ನಾವು ಸಭೆ ಬಹಿಷ್ಕರಿಸಿದೆವು. ಈ ಕಪ್ಪು ಕಾಯ್ದೆಯನ್ನು ಹಿಂದೆ ತೆಗೆಯುವಂತೆ ನಾವು ಆಗ್ರಹಿಸುತ್ತೇವೆ’’ ಎಂದು ಇನ್ನೊಬ್ಬ ರೈತ ನಾಯಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News