ಕೋಮು ಸೌಹಾರ್ದ ಕೆಡಿಸುವ ಷಡ್ಯಂತ್ರ: ಮುಹಮ್ಮದಲಿ

Update: 2020-10-14 10:30 GMT

ಪುತ್ತೂರು, ಅ.14: ಕೆಮ್ಮಿಂಜೆ ಗ್ರಾಮದ ಬೆದ್ರಾಳ ಎಂಬಲ್ಲಿ ಮೌಲಾನಾ ಅಝಾದ್ ಶಾಲೆ ನಿರ್ಮಾಣಕ್ಕೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ. ಇದೊಂದು ಕೋಮು ಸೌಹಾರ್ಧ ಕೆಡಿಸುವ ಷಡ್ಯಂತ್ರ ಎಂದು ಪುತ್ತೂರು ನಗರಸಭೆಯ ಮಾಜಿ ವಿಪಕ್ಷ ನಾಯಕ ಎಚ್. ಮುಹಮ್ಮದಲಿ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.

ಪುತ್ತೂರು ನಗರದಲ್ಲಿ ಬೇರೆಲ್ಲೂ ಶಾಲೆಗೆ ಅನುಕೂಲಕರ ಸರಕಾರಿ ಸ್ಥಳ ಲಭ್ಯವಿಲ್ಲದ ಕಾರಣ ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಬೆದ್ರಾಳ ಶಾಲೆಯ ಈ ಜಾಗವನ್ನು ಮೌಲಾನಾ ಅಝಾದ್ ಶಾಲೆಗೆ ಕಂದಾಯ ಇಲಾಖೆ ಮಂಜೂರುಗೊಳಿಸಿತ್ತು. ಸರಕಾರದ ಯೋಜನೆಯಾಗಿರುವ ಕಾರಣ ಸದುದ್ದೇಶದಿಂದ ಶಾಸಕ ಸಂಜೀವ ಮಠಂದೂರು ಕಟ್ಟಡ ಮಂಜೂರಾತಿಗೆ ಪ್ರಯತ್ನಿಸಿದ್ದಾರೆ. ಆದರೆ ಇದೀಗ ಇದಕ್ಕೆ ಬಿಜೆಪಿಯವರೇ ವಿರೋಧಿಸುತ್ತಿದ್ದು, ಇದು ಶಾಸಕರ ವಿರುದ್ಧವೋ ಅಥವಾ ಶಾಲೆಯ ವಿರುದ್ಧವೋ ಎಂಬ ಜಿಜ್ಞಾಸೆಯಿದೆ. ಸ್ಥಳೀಯರು ಯಾರೂ ಶಾಲೆ ನಿರ್ಮಾಣಕ್ಕೆ ವಿರೋಧಿಸಿಲ್ಲ. ಆದರೆ ಹೊರಗಿನಿಂದ ಬಂದ ಕೆಲವರು ಬಿಜೆಪಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡವರು ಶಾಲೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷವೇ ಸರಕಾರದ ಯೋಜನೆಗೆ ವಿರೋಧ ವ್ಯಕ್ತ ಪಡಿಸುತ್ತಿರುವುದು ಆಶ್ಚರ್ಯಕರವಾಗಿದೆ. ಖಾಸಗಿ ಶಾಲೆಯವರ ಹಿತಾಸಕ್ತಿಗಾಗಿ ಈ ಪ್ರತಿರೋಧ ನಡೆಯುತ್ತಿದೆ ಎಂಬ ಶಂಕೆಯಿದೆ ಎಂದರು.

ಕೇಂದ್ರ ಸರಕಾರ ಇಲ್ಲಿ ಶಾಲೆ ನಿರ್ಮಿಸುತ್ತಿದೆಯೇ ಹೊರತು ಯಾವುದೇ ಧಾರ್ಮಿಕ ಕೇಂದ್ರವನ್ನಲ್ಲ. ಸಾಮರಸ್ಯ, ಸೌಹಾರ್ದದಿಂದ ನೆಮ್ಮದಿಯಾಗಿದ್ದ ಕೆಮ್ಮಿಂಜೆ ಗ್ರಾಮದ ಜನರ ಜೀವನವನ್ನು ಹಾಳು ಮಾಡುವ ದುರುದ್ದೇಶದಿಂದ ಶಾಲೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಕೋಮು ಸೌಹಾರ್ದ ಕೆಡಿಸುವ ಕಾರ್ಯ ಮಾಡುತ್ತಿರುವ ಹೊರಗಿನ ಸಮಾಜಘಾತುಕ ಶಕ್ತಿಗಳನ್ನು ಗುರುತಿಸಿ ಪೊಲೀಸ್ ವರಿಷ್ಠಾಧಿಕಾರಿ ಮಟ್ಟ ಹಾಕಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಮ್ಮಿಂಜೆ ಸಂಜಯ ನಗರ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಇಸುಬು ಕೆ., ಕೆಮ್ಮಿಂಜೆ ಕೂರ್ನಡ್ಕ ದೀನಾರ್ ಫ್ರೆಂಡ್ಸ್ ಸಂಚಾಲಕ ಜಮಾಲ್ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News