×
Ad

ಹತ್ರಸ್ ಪ್ರಕರಣ ಖಂಡಿಸಿ ದಲಿತ ಹೋರಾಟ ಸಮಿತಿ ಪ್ರತಿಭಟನೆ

Update: 2020-10-14 18:05 IST

ಮಂಗಳೂರು, ಅ. 14: ಉತ್ತರ ಪ್ರದೇಶದ ಹತ್ರಸ್ನಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಕರ್ನಾಟಕ ದಲಿತ ಹೋರಾಟ ಸಮಿತಿಯ ವತಿಯಿಂದ ಬುಧವಾರ ನಗರದ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಅಶೋಕ್ ಕೊಂಚಾಡಿ ಅವರು, ‘ಈ ಹಿಂದೆ ದಿಲ್ಲಿಯಲ್ಲಿ ನಿರ್ಭಯಾ ಪ್ರಕರಣ ನಡೆದಿದ್ದಾಗ ಸರಕಾರ ಸಂತ್ರಸ್ತೆಗೆ ವಿಶೇಷ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ದಿತ್ತು. ಅಲ್ಲದೆ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ಮಾಡಿತ್ತು. ಆದರೆ ಉತ್ತರ ಪ್ರದೇಶ ಸರಕಾರ ವೈದ್ಯಕೀಯ ನೆರವು ಕೂಡ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕರ್ತವ್ಯಲೋಪ ವೆಸಗಿರುವುದು ಮಾತ್ರವಲ್ಲದೆ ಯಾವುದೇ ಕನಿಕರ ಕೂಡ ತೋರಿಸಿಲ್ಲ. ಅವರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸಲು ಅನರ್ಹರಾಗಿದ್ದಾರೆ. ಅವರನ್ನು ವಜಾಗೊಳಿಸಬೇಕು’ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಪಿ.ಆನಂದ, ಜಿಲ್ಲಾ ಸಂಘಟನಾ ಸಂಚಾಲಕ ಇಶು ಕುಮಾರ್, ಪ್ರಮುಖರಾದ ಅನಿಲ್, ರಮೇಶ್ ಕೋಟ್ಯಾನ್, ದೇವು, ಜಯಪ್ರಕಾಶ್, ನಾರಾಯಣ್, ಅಶೋಕ್ ಪೂಜಾರಿ ಮೊದಲಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News