×
Ad

ಉಡುಪಿ ಜಿಲ್ಲೆಯ 197 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ

Update: 2020-10-14 19:09 IST

ಉಡುಪಿ, ಅ.13: ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 197 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರ ಗಡಿ ದಾಟಿ ಮುಂದೆ ಸಾಗಿದೆ. ಇದರೊಂದಿಗೆ ದಿನದಲ್ಲಿ ಇಬ್ಬರು ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆಯೂ 170ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಬುಧವಾರ ಪಾಸಿಟಿವ್ ಬಂದವರಲ್ಲಿ ಮಕ್ಕಳು ಸೇರಿದಂತೆ 110 ಮಂದಿ ಪುರುಷರು ಹಾಗೂ 87 ಮಂದಿ ಮಹಿಳೆಯರಾಗಿದ್ದಾರೆ. ಇವರಲ್ಲಿ 68 ಪುರುಷರು ಹಾಗೂ 62 ಮಂದಿ ಮಹಿಳೆಯರಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನ 116, ಕುಂದಾಪುರ ತಾಲೂಕಿನ 41 ಹಾಗೂ ಕಾರ್ಕಳ ತಾಲೂಕಿನ 38 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಉಳಿದಿಬ್ಬರು ಹೊರಜಿಲ್ಲೆಗಳಿಂದ ಚಿಕಿತ್ಸೆಗೆಂದು ಜಿಲ್ಲೆಗೆ ಬಂದು ಇಲ್ಲಿ ಪಾಸಿಟಿವ್ ಬಂದವರು ಎಂದು ಡಾ.ಸೂಡ ವಿವರಿಸಿದರು.

ದಿನದಲ್ಲಿ ಪಾಸಿಟಿವ್ ಬಂದ 197 ಮಂದಿಯಲ್ಲಿ 32 ಮಂದಿಯನ್ನು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದ 165 ಮಂದಿ ತಮ್ಮ ಮನೆಗಳಲ್ಲೇ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಡಾ.ಸೂಡ ತಿಳಿಸಿದರು.

163 ಗುಣಮುಖ: ದಿನದಲ್ಲಿ ಒಟ್ಟು 163 ಮಂದಿ ಸೋಂಕಿನಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಹೀಗೆ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ 17,901 ಆಗಿದೆ. ಜಿಲ್ಲೆಯಲ್ಲಿ ಸದ್ಯ 2026 ಸಕ್ರೀಯ ಕೋವಿಡ್ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಮತ್ತು ಮನೆಗಳ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದವರು ತಿಳಿಸಿದರು.

1041 ನೆಗೆಟಿವ್: ಜಿಲ್ಲೆಯಲ್ಲಿ ಇಂದು ಒಟ್ಟು 1220 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ 1041 ಮಂದಿ ನೆಗೆಟಿವ್ ಬಂದಿದ್ದು, 179 ಮಂದಿ ಪಾಸಿಟಿವ್ ಬಂದಿದ್ದಾರೆ. ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 20,078 ಆಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,49,676 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1,29,598 ಮಂದಿ ನೆಗೆಟಿವ್ ಬಂದಿದ್ದಾರೆ. 20,078 ಮಂದಿ ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ 17,901 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದಾರೆ. 170 ಮಂದಿ ಮೃತಪಟ್ಟಿದ್ದಾರೆ.

ಇಬ್ಬರು ಬಲಿ: ಬುಧವಾರ ಜಿಲ್ಲೆಯಲ್ಲಿ ಉಡುಪಿ ತಾಲೂಕಿನ ಇಬ್ಬರು ಪುರುಷರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಒಬ್ಬರು 82 ವರ್ಷ ಪ್ರಾಯದ ಹಿರಿಯ ನಾಗರಿಕರಾದರೆ, ಇನ್ನೊಬ್ಬರು 46 ವರ್ಷ ಪ್ರಾಯ ಮಧ್ಯವಯಸ್ಕರು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್ ತಿಳಿಸಿದೆ.

ಹೃದಯ ಸಮಸ್ಯೆ, ಕ್ಯಾನ್ಸರ್ ಸೇರಿದಂತೆ ವಿವಿಧ ಸಮಸ್ಯೆಗಳಿಂದ ನರಳುತಿದ್ದ 82 ವರ್ಷ ಪ್ರಾಯದ ವೃದ್ಧರಲ್ಲಿ ಚಿಕಿತ್ಸೆಯ ವೇಳೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆ, ಮಧುಮೇಹ ದೊಂದಿಗೆ ಕಿಡ್ನಿ ಸಮಸ್ಯೆಗೆ ತುತ್ತಾದ 46ರ ಮಧ್ಯ ವಯಸ್ಕರಲ್ಲೂ ಉಸಿರಾಟದ ತೊಂದರೆಯೊಂದಿಗೆ ಕೋವಿಡ್ ಸೋಂಕು ಪತ್ತೆಯಾಗಿತ್ತು ಎಂದು ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News