×
Ad

ಕಾಂಗ್ರೆಸ್ ಸೇರಿದ ಶರದ್ ಯಾದವ್ ಪುತ್ರಿ ಸುಭಾಷಿಣಿ

Update: 2020-10-14 19:59 IST

ಪಾಟ್ನಾ, ಅ.14: ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಲೋಕ ತಾಂತ್ರಿಕ ಜನತಾದಳ ಪಕ್ಷದ ವರಿಷ್ಠ ಶರದ್ ಯಾದವ್ ಅವರ ಪುತ್ರಿ ಸುಭಾಷಿಣಿ ಯಾದವ್ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಸುಭಾಷಿಣಿ ಅವರ ಜೊತೆಗೆ ಎಲ್‌ಜೆಪಿ ಮಾಜಿ ಸಂಸದ ಕಾಳಿ ಪಾಂಡೆ ಕೂಡಾ ಕಾಂಗ್ರೆಸ್ ಸೇರಿದ್ದಾರೆ. ರಾಜ್ಯದ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಇವರಿಬ್ಬರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸುಭಾಷಿಣಿ ಯಾದವ್ ಹಾಗೂ ಕಾಳಿ ಪಾಂಡೆ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಸಾಧ್ಯತೆಯಿದೆ.

ತನ್ನ ತಂದೆ ಶರದ್‌ ಯಾದವ್ ಅವರು ಸದಾ ಬೆಂಬಲಿಸುತ್ತಿದ್ದ ಮಹಾಘಟಬಂಧನ ಮೈತ್ರಿಕೂಟದ ಹೋರಾಟವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ತಾನು ಕೈಗೆತ್ತಿಕೊಳ್ಳುವುದಾಗಿ ಸುಭಾಷಿಣಿ ಯಾದವ್ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಭಾಷಿಣಿ ಅವರು‘‘ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಸೋನಿಯಾ,ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ವಾಧ್ರಾ ಅವರಿಗೆ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿದರು. ‘‘ಅಸ್ವಸ್ಥತೆಯ ಕಾರಣದಿಂದಾಗಿ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ನನ್ನ ತಂದೆ ಶರದ್ ಯಾದವ್ ಸ್ಪರ್ಧಿಸುತ್ತಿಲ್ಲ. ಆದರೆ ಅವರು ಯಾವತ್ತೂ ಮಹಾಘಟಬಂಧನ ಮೈತ್ರಿಕೂಟವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಬಿಹಾರದ ಮಹೋನ್ನತಿಗಾಗಿ ಈ ಹೋರಾಟವನ್ನು ನಡೆಸುವುದು ನನ್ನ ಜವಾಬ್ದಾರಿಯಾಗಿದೆ ’’ಎಂದರು.

ಎಲ್‌ಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಕಾಳಿ ಪಾಂಡೆ ಅವರು ಮಾತನಾಡಿ,ತಾನು 1984ರಲ್ಲಿ ಲೋಕಸಭಾ ಸದಸ್ಯನಾಗಿದ್ದಾಗ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಬೆಂಬಲಿಸಿದ್ದು, ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಮನೆಗೆ ಮರಳಿದ ಅನುಭವ ನೀಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News