×
Ad

ಉಡುಪಿ ಜಿಲ್ಲೆಯಾದ್ಯಂತ ಮುಂದುವರೆದ ಮಳೆ : ಪರ್ಕಳದಲ್ಲಿ ರಾ.ಹೆದ್ದಾರಿಗೆ ಉರುಳಿದ ಮರ

Update: 2020-10-14 20:17 IST

ಉಡುಪಿ, ಅ.13: ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿ ಣಾಮ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೃಷಿ ಬೆಳೆಗೆ ಅಪಾರ ಪ್ರಮಾಣದ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಮಣಿಪಾಲ ಸಮೀಪದ ಕೆಳಪರ್ಕಳ ರಾಷ್ಟ್ರೀಯ ಹೆದ್ದಾರಿ 169 ಎಯಲ್ಲಿರುವ ಬೃಹತ್ ಹಲಸಿನ ಮರವೊಂದು ಗಾಳಿಮಳೆಗೆ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಹಲವು ತಾಸು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗಳು ಬೆಳಗ್ಗೆ 8 ಗಂಟೆ ಸುಮಾರಿಗೆ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದರು. ಇದರಿಂದ ಬೆಳಗ್ಗೆ ಹಿರಿಯಡ್ಕ, ಪರ್ಕಳ, ಆತ್ರಾಡಿ ಕಡೆಯಿಂದ ಮಣಿಪಾಲಕ್ಕೆ ಕೆಲಸಕ್ಕೆ ಹೋಗುವ ಸಾಕಷು್ಟ ಮಂದಿ ತೊಂದರೆ ಅನುಭವಿಸಿದರು.

ದ್ವಿಚಕ್ರ ವಾಹನಗಳು ಒಳರಸ್ತೆಯಲ್ಲಿ ಆಗಮಿಸಿದರೆ, ಬಸ್ ಹಾಗೂ ಇತರ ವಾಹನಗಳು 80ಬಡಗಬೆಟ್ಟು ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ದವು. ಇದೀಗ ಅಲ್ಲೇ ಸಮೀಪ ನೀರಿನ ಟ್ಯಾಂಕರ್ ಬಳಿ ಇರುವ ಇನ್ನೊಂದು ಮರ ಕೂಡ ರಸ್ತೆ ಬೀಳುವ ಸ್ಥಿತಿಯಲ್ಲಿದ್ದು, ಕೂಡಲೇ ಇದನ್ನು ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಮತ್ತೆ ಕೊಚ್ಚಿ ಹೋದ ಸೇತುವೆ

ಈ ಹಿಂದೆ ಸುರಿದ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಬ್ರಹ್ಮಾವರ ತಾಲೂಕಿನ ನಡೂರು ಗ್ರಾಪಂ ವ್ಯಾಪ್ತಿಯ ನಡೂರು -ಬಂಡೀಮಠ ಸಂರ್ಪಕ ರಸ್ತೆಯಲ್ಲಿರುವ ಕಿರು ಸೇತುವೆ ಸೆ.19ರಂದು ಕೊಚ್ಚಿಕೊಂಡು ಹೋಗಿ ಸಂರ್ಪಕ ಕಡಿತವಾಗಿತ್ತು. ಮಳೆ ಬಿಟ್ಟ ಬಳಿಕ ಕೆಲ ದಿನಗಳ ಹಿಂದೆ ಗ್ರಾಪಂ ಸಹಕಾರ ದೊಂದಿಗೆ ಸ್ಥಳೀಯರು ಮೋರಿ ಆಳವಡಿಸಿ, ಮಣ್ಣು ಹಾಕಿ ಈ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದರು.

ಇದೀಗ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅ.13ರಂದು ಈ ತಾತ್ಕಾಲಿಕ ವ್ಯವಸ್ಥೆ ಕೂಡ ಕೊಚ್ಚಿಕೊಂಡು ಹೋಗಿದೆ. ಇದರಿಂದ ಮತ್ತೆ ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೆ ಈ ತೋಡಿನ ಸಮೀಪ ಇರುವ ಸಾಕಷ್ಟು ಎಕರೆ ಭತ್ತದ ಕೃಷಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ. ಇದೇ ಗ್ರಾಪಂ ವ್ಯಾಪ್ತಿಯ ತಂತ್ರಾಡಿ ಬರದಕಲ್ಲು- ಹೊಸ್ಕೆರೆ ಸಂಪರ್ಕ ರಸ್ತೆಯ ತಂತ್ರಾಡಿ ಎಂಬಲ್ಲಿ ರಸ್ತೆ ಕುಸಿತವಾಗಿರುವುದು ಕಂಡುಬಂದಿದೆ.

ನಡೂರು ಕಿರುಸೇತುವೆ ದುರಸ್ತಿಗಾಗಿ ಸಂಬಂಧಪಟ್ಟ ಇಲಾಖೆಗೆ 15ಲಕ್ಷ ರೂ. ಅನುದಾನದ ಪ್ರಸ್ತಾವ ಕಳುಹಿಸಲಾಗಿದೆ. ತಾತ್ಕಾಲಿಕವಾಗಿ ಮಾಡಲಾಗಿದ್ದ ರಸ್ತೆ ಮತ್ತೆ ಕೊಚ್ಚಿಕೊಂಡು ಹೋಗಿರುವುದರಿಂದ ಜನ ಸುತ್ತುಬಳಸಿ ಬರುವಂತಾಗಿದೆ ಎಂದು ನಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ತಿಳಿಸಿದ್ದಾರೆ.

ಭತ್ತದ ಕೃಷಿಗೆ ಅಪಾಯ

ಈ ಬಾರಿ ಉಡುಪಿ ಜಿಲ್ಲೆಯಾದ್ಯಂತ 35750 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ನಡೆಸಲಾಗಿದ್ದು, ಇದೀಗ ಸತತವಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಕೃಷಿಗೆ ಅಪಾರ ಹಾನಿ ಉಂಟಾಗಿರುವ ಸಾಧ್ಯತೆ ಇದೆ. ಅಜೆಕಾರು ಸೇರಿದಂತೆ ಕಾರ್ಕಳ ತಾಲೂಕಿನ ಹಲವು ಕಡೆಗಳಲ್ಲಿ ಕಟಾವು ಮಾಡಲಾದ ಭತ್ತದ ಪೈರು ಸತತ ಎರಡು ದಿನಗಳ ಮಳೆಗೆ ನೆನೆಯುತ್ತಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಆತಂಕದಲ್ಲಿ ರೈತರಿದ್ದಾರೆ.

ಜಿಲ್ಲೆಯ ಬಹುತೇಕ ತಗ್ಗು ಮತ್ತು ಬಯಲು ಪ್ರದೇಶಗಳಲ್ಲಿ ನವರಾತ್ರಿ ವೇಳೆಗೆ ಭತ್ತ ಕೊಯ್ಲಿಗೆ ಬರುತ್ತಿದ್ದು, ಕಟಾವಿಗೆ ಬಂದಿರುವ ಭತ್ತಕ್ಕೆ ಮಳೆ ಬೀಳುವುದರಿಂದ ಹಾನಿಯಾಗುತ್ತದೆ ಎಂಬ ಆತಂಕ ಕೃಷಿಕರಲ್ಲಿ ಎದುರಾಗಿದೆ. ಈಗಾಗಲೇ ಕೆಲವು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಕೃಷಿ ಪ್ರದೇಶಗಳಿಗೆ ನುಗ್ಗಿರುವ ಬಗ್ಗೆ ವರದಿಯಾಗಿದೆ. ಅದೇ ರೀತಿ ಹಲವು ಕಡೆ ಕಟಾವು ಮಾಡಲಾದ ಭತ್ತದ ಪೈರಿಗೆ ಹಾನಿಯಾಗಿದೆ.

‘ಸದ್ಯ ಭತ್ತದ ಕೃಷಿಗೆ ಸಂಬಂಧಿಸಿ ಹಾನಿಯಾಗಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ. ಈಗ ಸುರಿಯುತ್ತಿರುವ ಮಳೆಯಿಂದ ನಮ್ಮಲ್ಲಿನ ಎಂಓ4 ಭತ್ತದ ತಳಿಗೆ ಯಾವುದೇ ಹಾನಿಯಾಗುವುದಿಲ್ಲ’ ಎಂದು ಉಡುಪಿ ಜಂಟಿ ಕೃಷಿ ನಿದೆರ್ೀಶಕ ಎಚ್.ಕೆಂಪೇಗೌಡ ತಿಳಿಸಿದ್ದಾರೆ.

ಬಂದರಿಗೆ ಮರಳುತ್ತಿರುವ ಬೋಟುಗಳು!

ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರಿಕೆ ಇಲಾಖೆಯ ಸೂಚನೆ ಯಂತೆ ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಹೊರರಾಜ್ಯಗಳ ಬೋಟುಗಳು ಸೇರಿದಂತೆ ಸ್ಥಳೀಯ ಬೋಟುಗಳು ಮಲ್ಪೆ ಬಂದರಿಗೆ ವಾಪಾಸ್ಸು ಆಗಮಿಸುತ್ತಿರುವ ಬಗ್ಗೆ ವರದಿಯಾಗಿದೆ.

‘ಸಣ್ಣ ಟ್ರಾಲ್ ಬೋಟು, ನಾಡದೋಣಿ, 370 ಟ್ರಾಲ್ ಬೋಟು ಮತ್ತು ಪರ್ಸಿನ್ ಬೋಟುಗಳು ಮೀನುಗಾರಿಕೆಗೆ ತೆರಳದೆ ಈಗಾಗಲೇ ಬಂದರಿ ನಲ್ಲಿ ಲಂಗರು ಹಾಕಿವೆ. ಉಳಿದಂತೆ ಮೀನುಗಾರಿಕೆ ತೆರಳಿರುವ ಆಳಸಮುದ್ರ ಮೀನುಗಾರಿಕೆಯ ಬೋಟುಗಳು ಬಂದರಿಗೆ ಮರಳುತ್ತಿವೆ. ಈಗಾಗಲೇ ಶೇ.50 ರಷ್ಟು ಬೋಟುಗಳು ಬಂದರಿಗೆ ಮರಳಿವೆ’ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದ್ದಾರೆ.

ಇದರೊಂದಿಗೆ ಅರಬಿಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕೇರಳ ಮತ್ತು ತಮಿಳುನಾಡಿನ ಬೋಟುಗಳು ಕೂಡ ಮಲ್ಪೆ ಬಂದರಿಗೆ ಆಗಮಿಸಿವೆ. ಇದ ರಿಂದ ಬಂದರಿನಲ್ಲಿ ಬೋಟುಗಳ ಒತ್ತಡ ಹೆಚ್ಚಾಗಿದೆ. ದೂರದಲ್ಲಿರುವ ನಮ್ಮ ಬೋಟಿನವರು ಸಮೀಪದ ಬಂದರಿಗೆ ಹೋಗಿರುವ ಬಗ್ಗೆ ಯಾವುದೇ ಮಾಹಿತಿ ನಮಗೆ ಈವರೆಗೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ದಿನದಲ್ಲಿ 11.7ಸೆ.ಮಿ. ಮಳೆ

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 117.0 ಮಿ.ಮೀ. ಮಳೆಯಾದ ಬಗ್ಗೆ ವರದಿ ಬಂದಿದೆ. ಉಡುಪಿಯಲ್ಲಿ ಅತ್ಯಧಿಕ 120 ಮಿ.ಮೀ. ಮಳೆಯಾದರೆ, ಕುಂದಾಪುರದಲ್ಲಿ 109.5ಮಿ.ಮೀ. ಹಾಗೂ ಕಾರ್ಕಳದಲ್ಲಿ 118 ಮಿ.ಮೀ. ಮಳೆಯಾಗಿದೆ.

ನಿನ್ನೆಯಂತೆ ಇಂದು ಸಹ ಜಿಲ್ಲೆಯಾದ್ಯಂತ ದಿನವಿಡೀ ಮಳೆ ಸುರಿಯುತ್ತಿದೆ. ಸತತ ಮಳೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ರತ್ನ ಪೂಜಾರ್ತಿ ಎಂಬವರ ವಾಸ್ತವ್ಯದ ಮನೆಗೆ ಭಾಗಶ: ಹಾನಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ ಎಂದು ಕಾರ್ಕಳ ತಾಲೂಕು ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News