ದಂಗೆ ಪ್ರಕರಣ: ಗುಜರಾತ್ ಬಿಜೆಪಿ ಶಾಸಕನಿಗೆ ಆರು ತಿಂಗಳು ಜೈಲು

Update: 2020-10-14 15:46 GMT

ಜಾಮ್ ನಗರ, ಅ.14: ಹದಿಮೂರು ವರ್ಷಗಳ ಹಿಂದೆ ಜಾಮ್ ನಗರ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ದಾಂಧಲೆ ಮತ್ತು ದಂಗೆ ನಡೆಸಿದ್ದ ಆರೋಪದಲ್ಲಿ ಬಿಜೆಪಿ ಶಾಸಕ ರಾಘವಜಿ ಪಟೇಲ್ ಮತ್ತು ಇತರ ನಾಲ್ವರಿಗೆ ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯವು ಆರು ತಿಂಗಳು ಜೈಲುಶಿಕ್ಷೆ ಮತ್ತು ತಲಾ 10,000 ರೂ.ಗಳ ದಂಡವನ್ನು ವಿಧಿಸಿದೆ. ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಶಿಕ್ಷೆಯನ್ನು ಪ್ರಕಟಿಸಿದ ಬಳಿಕ ನ್ಯಾಯಾಲಯವು ಎಲ್ಲ ಐವರಿಗೆ ಜಾಮೀನು ಮಂಜೂರು ಮಾಡಿದೆ. 2007, ಆಗಸ್ಟ್‌ನಲ್ಲಿ ಘಟನೆ ನಡೆದಾಗ ಪಟೇಲ್ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದರು.

ಅಹವಾಲೊಂದನ್ನು ಸಲ್ಲಿಸಲು ಜಾಮ್ ನಗರ ಜಿಲ್ಲೆಯ ಧ್ರೋಲ್ ಪಟ್ಟಣದ ಆಸ್ಪತ್ರೆಯೊಂದಕ್ಕೆ ತೆರಳಿದ್ದ ಪಟೇಲ್ ಮತ್ತು ಬೆಂಬಲಿಗರು ಬಲವಂತದಿಂದ ವೈದ್ಯರ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ, ಆಸ್ಪತ್ರೆಯ ಸೊತ್ತುಗಳಿಗೆ ಹಾನಿಯನ್ನುಂಟು ಮಾಡಿದ್ದರು. ಈ ಸಂಬಂಧ ಆ.17ರಂದು ಧ್ರೋಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪಟೇಲ್ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಅವರ ವಿರುದ್ಧದ ಪ್ರಕರಣವನ್ನು ಹಿಂದೆಗೆದುಕೊಳ್ಳಲು ಸರಕಾರವು ಈ ಹಿಂದೆ ಅರ್ಜಿ ಸಲ್ಲಿಸಿತ್ತಾದರೂ ನ್ಯಾಯಾಲಯವು ಅದನ್ನು ತಿರಸ್ಕರಿಸಿತ್ತು.

2017 ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಾಮ್ ನಗರ (ಗ್ರಾಮೀಣ) ಕ್ಷೇತ್ರದಿಂದ ಗೆದ್ದಿದ್ದ ಪಟೇಲ್ ಬಳಿಕ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. 2019ರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿ ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News