ಯುದ್ಧಕ್ಕೆ ಸನ್ನದ್ಧರಾಗಿ: ಸೈನಿಕರಿಗೆ ಚೀನಾ ಅಧ್ಯಕ್ಷ ಕರೆ

Update: 2020-10-14 15:54 GMT

ಬೀಜಿಂಗ್, ಅ. 14: ಯುದ್ಧಕ್ಕೆ ಸನ್ನದ್ಧರಾಗಿರುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೈನಿಕರಿಗೆ ಕರೆ ನೀಡಿದ್ದಾರೆ ಎಂದು ಸಿಎನ್‌ಎನ್ ಸುದ್ದಿವಾಹಿನಿಯು ವರದಿ ಮಾಡಿದೆ.

ಚೀನಾ ಮತ್ತು ಭಾರತಗಳ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಬರುವ ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ದೇಶಕ್ಕೆ ಸಂಪೂರ್ಣ ನಿಷ್ಠೆ ಹೊಂದುವಂತೆಯೂ ಅವರು ಸೈನಿಕರಿಗೆ ಕರೆ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.

ಕ್ಸಿ ಜಿನ್‌ಪಿಂಗ್ ಮಂಗಳವಾರ ಗುವಾಂಗ್‌ಡಾಂಗ್‌ನಲ್ಲಿರುವ ಸೇನಾ ನೆಲೆಯೊಂದಕ್ಕೆ ಭೇಟಿ ನೀಡಿದರು ಎಂದು ಸಿಎನ್‌ಎನ್‌ನಲ್ಲಿ ಪ್ರಸಾರವಾದ ವರದಿ ಹೇಳಿದೆ. ಈ ಸಂದರ್ಭದಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ನಿಮ್ಮ ತನು-ಮನ-ಶಕ್ತಿಯನ್ನು ಯುದ್ಧ ಸಿದ್ಧತೆಗಾಗಿ ಬಳಸಿಕೊಳ್ಳಿ ಹಾಗೂ ಗರಿಷ್ಠ ಎಚ್ಚರಿಕೆಯ ಸ್ಥಿತಿಯಲ್ಲಿರಿ’’ ಎಂದು ಹೇಳಿದರು ಎಂದು ಅದು ತಿಳಿಸಿದೆ. ಚೀನಾದ ಸರಕಾರಿ ಸುದ್ದಿಸಂಸ್ಥೆ ಕ್ಸಿನುವಾವನ್ನು ಉಲ್ಲೇಖಿಸಿ ತಾನು ಈ ವರದಿಯನ್ನು ಮಾಡಿರುವುದಾಗಿ ಸಿಎನ್‌ಎನ್ ತಿಳಿಸಿದೆ.

ಆದರೆ, ಚೀನಾ ಅಧ್ಯಕ್ಷರು ಈ ಹೇಳಿಕೆಯನ್ನು ಭಾರತವನ್ನು ಅಥವಾ ಅವೆುರಿಕವನ್ನು ಅಥವಾ ಬೇರೆ ಯಾವುದೇ ದೇಶವನ್ನು ಗಮನದಲ್ಲಿರಿಸಿಕೊಂಡು ಹೇಳಿದರೇ ಎನ್ನುವುದು ಸ್ಪಷ್ಟವಾಗಿಲ್ಲ. ದಕ್ಷಿಣ ಚೀನಾ ಸಮುದ್ರ ವಲಯದ ಮಾಲೀಕತ್ವಕ್ಕೆ ಸಂಬಂಧಿಸಿ ಚೀನಾವು ಹಲವು ದೇಶಗಳೊಂದಿಗೆ ಸಂಘರ್ಷಪೂರಿತ ಸಂಬಂಧವನ್ನು ಹೊಂದಿದೆ.

ಲಡಾಖ್ ವಲಯದಲ್ಲಿ ನೆಲೆಸಿರುವ ಸೇನಾ ಉದ್ವಿಗ್ನತೆಯನ್ನು ನಿವಾರಿಸುವ ಸಲುವಾಗಿ ಭಾರತ ಮತ್ತು ಚೀನಾಗಳ ನಡುವೆ ಮಂಗಳವಾರ ಸೇನಾಧಿಕಾರಿಗಳ ಮಟ್ಟದ ಏಳನೇ ಸುತ್ತಿನ ಸಭೆ ನಡೆಯಿತು.

ಉಭಯ ದೇಶಗಳ ನಡುವೆ ಸೇನಾ, ರಾಜತಾಂತ್ರಿಕ ಮತ್ತು ಸಚಿವ ಮಟ್ಟಗಳಲ್ಲಿ ಹಲವು ಸುತ್ತುಗಳ ಮಾತುಕತೆ ನಡೆದರೂ, ಹೆಚ್ಚಿನ ಯಶಸ್ಸು ದೊರೆತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News