ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ
ಮಂಗಳೂರು, ಅ.14: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಬುಧವಾರವೂ ಜಿಲ್ಲೆಯ ಘಟ್ಟದ ತಪ್ಪಲು ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ. ಹಲವೆಡೆ ಹಾನಿ ಸಂಭವಿಸಿದೆ.
ಮಂಗಳವಾರ ತಡರಾತ್ರಿ ಮತ್ತು ಬುಧವಾರ ಬೆಳಗ್ಗಿನವರರೆಗೆ ಸುರಿದ ಧಾರಾಕಾರ ಮಳೆಗೆ ನಗರದ ವಿವಿಧೆಡೆ ಕೃತಕ ನೆರೆ ಉಂಟಾಗಿದ್ದು, ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಪಂಪ್‌ವೆಲ್, ನಂತೂರು, ಜಿಎಚ್‌ಎಸ್, ಅಂಬೇಡ್ಕರ್ ವೃತ್ತ ಸೇರಿದಂತೆ ನಗದ ವಿವಿಧೆಡೆ ರಸ್ತೆಯಲ್ಲೇ ನೀರು ಹರಿದು ಹೋಗಿದೆ.
ಮಂಗಳೂರು ನಗರದ ಕೊಟ್ವಾರ ಚೌಕಿ-ಮಾಲೆಮಾರ್ ಪ್ರದೇಶದಲ್ಲಿ ಈ ಬಾರಿಯೂ ರಾಜಕಾಲುವೆಯಿಂದ ನೀರು ಹೊರಕ್ಕೆ ಹರಿದಿದ್ದು, ಪರಿಣಾಮ ತಗ್ಗು ಪ್ರದೇಶದಲ್ಲಿದ್ದ ಹಲವು ಮನೆಗಳು ನೀರಿನಿಂದ ಆವೃತವಾಗಿತ್ತು. ಜತೆಗೆ ಹೆದ್ದಾರಿ ಬದಿ ತಗ್ಗಿನಲ್ಲಿದ್ದ ಹಲವು ಅಂಗಡಿ ಹೋಟೆಲ್ ಗಳ ಒಳಗೂ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಿದೆ. ಒಳಚರಂಡಿ ಮ್ಯಾನ್‌ಹೋಲ್‌ಗಳಿಂದಲೂ ಕಲುಷಿತ ನೀರು ಹೊರಕ್ಕೆ ಹರಿದು ಮಳೆ ನೀರಿನೊಂದಿಗೆ ಸೇರಿದ್ದು, ಸ್ಥಳೀಯರು ಸಂಕಷ್ಟ ಅನುಭವಿಸಿದರು. ಹೊತ್ತೇರುತ್ತಿದ್ದಂತೆ ಮಳೆ ಕಡಿಮೆಯಾಗಿ ನೀರು ಹರಿದು ಹೋಗಿದೆ.
ಮಂಗಳೂರಿನ ವಿವಿಧೆಡೆ ಆವರಣ ಗೋಡೆಗಳು ಕುಸಿದು ಬಿದ್ದಿವೆ. ಮಧ್ಯಾಹ್ನ ಬಳಿಕ ಮಳೆಯ ಪ್ರತಾಪ ಕಡಿಮೆಯಾಗಿತ್ತು. ಘಟ್ಟದ ತಪ್ಪಲು ಪ್ರದೇಶಗಳಲ್ಲೂ ದಿನವಿಡೀ ಉತ್ತಮ ಮಳೆಯಾಗಿದ್ದು, ಭತ್ತ, ಅಡಕೆ ಸಹಿತ ಕೃಷಿ ಭೂಮಿಯಲ್ಲಿ ನೀರು ನಿಂತು ರೈತರು ಕಂಗಾಲಾಗುವಂತೆ ಮಾಡಿದೆ.
ನಗರದ ಪಡೀಲ್ ರಾಷ್ಟ್ರೀಯ ಹೆದ್ದಾರಿಯ ರೈಲ್ವೆ ಅಂಡರ್‌ಪಾಸ್ ಬಳಿಯೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆ ಉಂಟಾಗಿತ್ತು. ಬೆಳಗ್ಗೆ 5 ಗಂಟೆ ವೇಳೆಗೆ ಅಲ್ಲಿನ ಅಯ್ಯಪ್ಪ ಮಂದಿರ ಸೇರಿದಂತೆ ಅಕ್ಕಪಕ್ಕದ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ. ಸುಮಾರು ಹೊತ್ತು ಹೆದ್ದಾರಿ ಭಾಗಶಃ ಕೆರೆಯಂತಾದ ಪರಿಣಾಮ ಮುಂಜಾನೆ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಸುಮಾರು 2 ಅಡಿ ನೀರು ಸಂಗ್ರಹಗೊಂಡಿತ್ತು ಎಂದು ತಿಳಿದುಬಂದಿದೆ.
ಕೆಎಸ್‌ರಾವ್ ರಸ್ತೆಯ ಎಸ್‌ಸಿಡಿಸಿಸಿ ಬ್ಯಾಂಕ್ ಬಳಿಯ ಅಪಾರ್ಟ್‌ಮೆಂಟ್ ಒಂದರ ಆವರಣಗೋಡೆ ಕುಸಿದು ಪಕ್ಕದ ತೋಡಿನ ನೀರು ಪಾರ್ಕಿಂಗ್ ಸ್ಥಳದಲ್ಲಿ ಹಲವು ಅಡಿಗಳಷ್ಟು ಎತ್ತರಕ್ಕೆ ಸಂಗ್ರಹಗೊಂಡಿತ್ತು. ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರು ಮತ್ತು ಒಂದು ಬೈಕ್ ಹಲವು ಗಂಟೆಗಳ ಕಾಲ ನೀರಿನಲ್ಲಿ ಮುಳುಗಿದ್ದ ಪರಿಣಾಮ ಹಾನಿಯಾಗಿದೆ. ಬೆಳಗ್ಗೆ ಪಂಪ್ ಬಳಸಿ ನೀರು ಖಾಲಿ ಮಾಡಿ ವಾಹನಗಳನ್ನು ಹೊರಕ್ಕೆ ತೆಗೆಯಲಾಯಿತು. ಸರಿಪಲ್ಲದಲ್ಲೂ ಮನೆಯೊಂದರ ಆವರಣಗೋಡೆ ಕುಸಿದು ಹಾನಿಯಾಗಿದೆ.
ಮರಕಡ ವಾರ್ಡ್ ಕೊರಂಟಾಡಿ ಎಂಬಲ್ಲಿ ನಸುಕಿನ ವೇಳೆ ಗುಡ್ಡ ಜರಿದು ಎರಡು ಮನೆಗಳಿಗೆ ನೀರು ನುಗ್ಗಿದೆ. ದಿನೇಶ್ ಹಾಗೂ ಗಂಗಾಧರ ಎಂಬುವರ ಮನೆ ಪಕ್ಕದ ಗುಡ್ಡ ಕುಸಿತಗೊಂಡು ನೀರು ಹರಿಯುವ ತೋಡಿಗೆ ಬಿದ್ದ ಕಾರಣ ನೀರು ಪಥ ಬದಲಿಸಿ ಮನೆಗೆ ನುಗ್ಗಿದೆ. ಎರಡು ವರ್ಷಗಳಿಂದ ಇಲ್ಲಿ ಸಮಸ್ಯೆ ಉಂಟಾಗುತ್ತಿದ್ದು ಮಹಾನಗರ ಪಾಲಿಕೆಗೆ ಮನವಿ ನೀಡಲಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಆರೋಪಿಸಲಾಗಿದೆ.
ಈ ಮೊದಲು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದರೂ, ಬುಧವಾರ ಬೆಳಗ್ಗೆ ಹವಾಮಾನ ಇಲಾಖೆ ಅಲರ್ಟ್ ‘ರೆಡ್’ ಆಗಿ ಬದಲಿಸಿತ್ತು. ಗುರುವಾರ ಮುಂಜಾನೆ 8:30ರ ವರೆಗೆ ರೆಡ್ ಅಲರ್ಟ್ ಇರಲಿದ್ದು, ಬಳಿಕ ಆರೆಂಜ್ ಅಲರ್ಟ್ ಮುಂದುವರಿಯಲಿದೆ.
ಸಮುದ್ರಲ್ಲಿ ಗಂಟೆಗೆ 45-55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರಿಗೆ ಎಚ್ಚರಿಕೆ ಮುಂದುವರಿದಿದೆ. ಗುರುವಾರವೂ ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ. ಈ ನಡುವೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದೆ ನೂರಾರು ಸಂಖ್ಯೆಯಲ್ಲಿ ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿವೆ. ಆಳಸಮುದ್ರಕ್ಕೆ ಮೀನುಗಾರಿಕೆಗೆ ಹೋಗಿದ್ದ ದೋಣಿಗಳೂ ವಾಪಾಸಾಗಿವೆ ಎಂದು ಮುಖಂಡರು ತಿಳಿಸಿದ್ದಾರೆ.
ಶಿರಾಡಿಯಲ್ಲಿ ಅಧಿಕ ದಾಖಲೆ: ಬುಧವಾರ ಬೆಳಗ್ಗಿನಿಂದ ಸಂಜೆವರೆನ ಮಾಹಿತಿಯಂತೆ ದ.ಕ ಜಿಲ್ಲೆಯ ಶಿರಾಡಿಯಲ್ಲಿ ಅತ್ಯಧಿಕ 70 ಮಿ.ಮೀ. ಮಳೆ ಸುರಿದಿದೆ. ಶಿಬಾಜೆಯಲ್ಲಿ 60.5 ಮಿ.ಮೀ ಮಳೆಯಾಗಿದೆ. ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಮಂಗಳೂರು ತಾಲೂಕಿನಲ್ಲಿ 146.9, ಬಂಟ್ವಾಳ 138.5, ಬೆಳ್ತಂಗಡಿ 120.2, ಪುತ್ತೂರು 103, ಸುಳ್ಯ 74 ಮಿ.ಮೀ. ಸಹಿತ ದ.ಕ ಜಿಲ್ಲೆಯಲ್ಲಿ ಸರಾಸರಿ 116.5 ಮಿ.ಮೀ. ಮಳೆ ಸುರಿದಿದೆ.