ಮಂಗಳೂರು ಸ್ಮಾರ್ಟ್‌ಸಿಟಿಯಿಂದ ಜಾಗ ಅತಿಕ್ರಮಣ: ಆರೋಪ
ಮಂಗಳೂರು, ಅ.14: ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಜಾಗವನ್ನು ಸ್ಮಾರ್ಟ್‌ಸಿಟಿಯವರು ಅತಿಕ್ರಮಣ ಮಾಡಿ ಕಟ್ಟಡ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಸರಕಾರಿ ನೌಕರರ ಸಂಘದ ನೌಕರರು ನಗರದ ಮಿನಿವಿಧಾನಸೌಧದ ಎದುರು ಬುಧವಾರ ಸಂಜೆ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಕೆ. ಕೃಷ್ಣ, ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ 33 ಸೆಂಟ್ಸ್ ಸ್ಥಳವಿದ್ದು, ಅದಕ್ಕೆ ನಮ್ಮಲ್ಲಿ ದಾಖಲೆ ಪತ್ರಗಳೂ ಇವೆ. ಆದರೆ ಇದೀಗ ಸ್ಮಾರ್ಟ್‌ಸಿಟಿಯವರು ರವಿವಾರದಿಂದ ಏಕಾಏಕಿ ಗುಂಡಿ ಮಾಡಿ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ನಾವು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಪೊಲೀಸರು ಎರಡು ಬಾರಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಆದಾಗ್ಯೂ, ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಹೇಳಿದ್ದಾ ರೆಂದು ರಾತ್ರೋರಾತ್ರಿ ಕಾಮಗಾರಿ ನಡೆಸುತ್ತಿದ್ದಾರೆ. ಆದರೆ ಅವರು ಹೇಳಿದ್ದಾರೆ ಎನ್ನುವುದಕ್ಕೆ ಯಾವುದೇ ದಾಖಲೆ ಪತ್ರಗಳಿಲ್ಲದೆ, ಪರವಾನಿಗೆ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ರಾತ್ರೋರಾತ್ರಿ ಕಾಮಗಾರಿ ನಿರ್ವಹಣೆಗೆ ಕಬ್ಬಿಣ ತಂದಿರಿಸಿದ್ದಾರೆ. ತಾಲೂಕು ಪಂಚಾಯತ್ ನಿಂದ ವಿದ್ಯುತ್ ಸಂಪರ್ಕ ತರಲಾಗಿದೆ. ಬುಧವಾರವೂ ರಾತ್ರಿ ಕಾಮಗಾರಿ ನಡೆಸುತ್ತಿದ್ದಾರೆ. ಈ ಕಾಮಗಾರಿ ನಡೆಸುವುದರಿಂದ ತಕ್ಷಣ ಸ್ಮಾರ್ಟ್‌ಸಿಟಿಯವರು ಹಿಂದೆ ಸರಿಯಬೇಕು ಎಂದು ಪಿ.ಕೆ. ಕೃಷ್ಣ ಆಗ್ರಹಿಸಿದರು.
ಈ ಸಂದರ್ಭ ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಎಂ.ಎಸ್., ಉಪಾಧ್ಯಕ್ಷರು, ಖಜಾಂಚಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.