×
Ad

ಮಂಗಳೂರು ಎಸಿ ವರ್ಗ ಮತ್ತೆ ರವಿಚಂದ್ರ ನಾಯಕ್ ನಿಯುಕ್ತಿ

Update: 2020-10-14 22:05 IST
ಮದನ್ ಮೋಹನ್

ಮಂಗಳೂರು, ಅ.14: ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಎ.ಸಿ. ಅವರನ್ನು ವರ್ಗಾವಣೆಗೊಳಿಸಿ, ಅವರ ಸ್ಥಾನಕ್ಕೆ ಮಂಗಳೂರು ಸ್ಮಾರ್ಟ್‌ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರವಿಚಂದ್ರ ನಾಯಕ್ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾಗಿರುವ ಮದನ್ ಮೋಹನ್ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ. ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಆದೇಶವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಮರಳಿ ಅದೇ ಹುದ್ದೆಗೆ: ರವಿಚಂದ್ರ ನಾಯಕ್ ಈ ಹಿಂದೆ ಮಂಗಳೂರು ಉಪವಿಭಾಗಾಧಿಕಾರಿಯಾಗಿದ್ದು, ವರ್ಗಾವಣೆಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ರವಿಚಂದ್ರ ನಾಯಕ್ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಮೊರೆ ಹೋಗಿದ್ದರು. ಇತ್ತೀಚೆಗೆ ತೀರ್ಪು ನೀಡಿದ ನ್ಯಾಯಾಲಯವು, ರವಿಚಂದ್ರ ನಾಯಕ್ ಅವರ ವಾದವನ್ನು ಪುರಸ್ಕರಿಸಿ ಮರಳಿ ಅದೇ ಹುದ್ದೆಗೆ ನಿಯೋಜಿಸುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿದೆ ಎಂದು ತಿಳಿದುಬಂದಿದೆ.

ಉಳ್ಳಾಲದ ಮುಡಿಪು ಪ್ರದೇಶದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಭಾರೀ ಅಕ್ರಮ ರೆಡ್ ಬಾಕ್ಸೈಟ್ ದಂಧೆಯನ್ನು ಮಟ್ಟ ಹಾಕಲು ಮದನ್ ಮೋಹನ್ ಮುಂದಾಗಿದ್ದರು. ಇತ್ತೀಚೆಗೆ ದಾಳಿ ನಡೆಸಿ 32 ಲಾರಿಗಳು, ಏಳು ಹಿಟಾಚಿ, ಎರಡು ಜೆಸಿಬಿ ಯಂತ್ರಗಳನ್ನು ಮುಟ್ಟುಗೋಲು ಹಾಕಿದ್ದರು. ಅದರ ಬೆನ್ನಲ್ಲೇ ಮದನ್ ವರ್ಗಾವಣೆಯಾಗುವ ಸುದ್ದಿ ಹರಿದಾಡುತ್ತಿತ್ತು. ಇದೇ ಹೊತ್ತಿನಲ್ಲಿ ಕರ್ನಾಟಕ ನ್ಯಾಯ ಮಂಡಳಿಯ ತೀರ್ಪು ಕೂಡ ಹೊರಬಿದ್ದಿದ್ದರಿಂದ ವರ್ಗಾವಣೆ ಸುಲಭದ ದಾರಿ ಸಿಕ್ಕಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News