×
Ad

ಆಟಿಕೆ ಕಾರ್ಖಾನೆಯಲ್ಲಿ ಸ್ಫೋಟ: ಮೃತರ ಸಂಖ್ಯೆ ನಾಲ್ಕಕ್ಕೇರಿಕೆ, 12 ಜನರಿಗೆ ಗಾಯ

Update: 2020-10-14 22:10 IST

ಅಲಿಗಡ (ಉ.ಪ್ರ), ಅ.14: ಇಲ್ಲಿಯ ದಿಲ್ಲಿ ಗೇಟ್ ಪ್ರದೇಶದಲ್ಲಿಯ ಆಟಿಕೆಗಳ ಕಾರ್ಖಾನೆಯಲ್ಲಿ ಮಂಗಳವಾರ ಸಂಭವಿಸಿದ್ದ ಸ್ಫೋಟದಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೇರಿದ್ದು, 12 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದರು. ಗ್ಯಾಸ್ ಸಿಲಿಂಡರ್‌ನಿಂದಾಗಿ ಸ್ಫೋಟ ಸಂಭವಿಸಿದಂತೆ ಕಂಡುಬರುತ್ತಿದ್ದು,ಸುತ್ತಲಿನ ಕನಿಷ್ಠ ಆರು ಮನೆಗಳಿಗೆ ಹಾನಿಯಾಗಿದೆ.

ಕಾರ್ಖಾನೆಯು ಕಳೆದ 50 ವರ್ಷಗಳಿಂದಲೂ ಆಟಿಕೆ ಪಿಸ್ತೂಲುಗಳನ್ನು ತಯಾರಿಸುತ್ತಿದ್ದು,ಸ್ಫೋಟದಿಂದ ಮೃತರಲ್ಲಿ ಕಾರ್ಖಾನೆಯ ಒಡೆತನ ಹೊಂದಿದ್ದ ಸೋದರರಾದ ಮನೋಜ್(38) ಮತ್ತು ವಿಶಾಲ್ ಅಲಿಯಾಸ್ ವಿಕ್ಕಿ (32) ಸೇರಿದ್ದಾರೆ. ಇತರ ಇಬ್ಬರು ಮೃತರನ್ನು ಪಂಕಜ್ (30) ಮತ್ತು ಅಭಿಷೇಕ್ (26) ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಇಲಾಖೆಗಳ ತಜ್ಞರ ತಂಡವು ಘಟನೆಯ ಬಗ್ಗೆ ತನಿಖೆಯನ್ನು ನಡೆಸಲಿದೆ ಎಂದು ಜಿಲ್ಲಾಧಿಕಾರಿ ಚಂದ್ರಭೂಷಣ ಸಿಂಗ್ ತಿಳಿಸಿದರು.

ಸಿಡಿಮದ್ದುಗಳ ತಯಾರಿಕೆಗೆ ಬಳಸುವ ಯಾವುದೋ ಸ್ಫೋಟಕ ವಸ್ತುವನ್ನು ಕಾರ್ಖಾನೆಯ ಆವರಣದಲ್ಲಿ ದಾಸ್ತಾನು ಮಾಡಿದ್ದಿರಬಹುದು ಅಥವಾ ಅಲ್ಲಿ ಹೈಡ್ರಾಲಿಕ್ ಪ್ರೆಷರ್ ಮಷಿನ್ ಇದ್ದಿರಬಹುದು. ಅವಶೇಷಗಳನ್ನು ತೆರವುಗೊಳಿಸಿದ ಬಳಿಕ ಈ ಸಾಧ್ಯತೆಗಳ ಬಗ್ಗೆ ತನಿಖೆಯನ್ನು ನಡೆಸಲಾಗುವುದು. ಹೈಡ್ರಾಲಿಕ್ ಪ್ರೆಷರ್ ಯಂತ್ರಗಳಲ್ಲಿ ಅತ್ಯಂತ ದಹನಶೀಲ ತೈಲವಿರುತ್ತದೆ ಮತ್ತು ಈ ತೈಲದ ಪೂರೈಕೆಯು ನಿಗದಿತ ಮಟ್ಟಕ್ಕಿಂತ ಕೆಳಗಿಳಿದರೆ ಬಿಸಿಯಾಗಿ ಭಾರೀ ಸ್ಫೋಟಕ್ಕೆ ಕಾರಣವಾಗಬಲ್ಲದು ಎಂದು ಅಗ್ನಿಶಾಮಕ ಅಧಿಕಾರಿ ವಿವೇಕ್ ಶರ್ಮಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News