×
Ad

ತನಿಷ್ಕ್ ಪ್ರಕರಣ: ಬೆದರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಜಾಹೀರಾತು ಸಂಘಟನೆಗಳು

Update: 2020-10-15 14:21 IST

ಹೊಸದಿಲ್ಲಿ: ಧಾರ್ಮಿಕ ಸಾಮರಸ್ಯದ ಸಂಕೇತದಂತಿದ್ದ ಹಾಗೂ ಸೀಮಂತ ಕಾರ್ಯಕ್ರಮವನ್ನು ಹಿಂದು-ಮುಸ್ಲಿಂ ಕುಟುಂಬವೊಂದು ಆಚರಿಸುವ  ಚಿತ್ರಣವನ್ನು ಬಿಂಬಿಸಿದ್ದ ತನಿಷ್ಕ್ ಸಂಸ್ಥೆಯ ಏಕತ್ವಂ ಚಿನ್ನಾಭರಣ ಕುರಿತಾದ ಜಾಹೀರಾತನ್ನು ಬೆದರಿಕೆಗಳ ಹಿನ್ನೆಲೆಯಲ್ಲಿ ಸಂಸ್ಥೆ ವಾಪಸ್ ಪಡೆದಿರುವ ಬೆಳವಣಿಗೆಯ ನಂತರ ಪ್ರತಿಕ್ರಿಯಿಸಿರುವ ದೇಶದ ಜಾಹೀರಾತು ಸಂಸ್ಥೆಗಳ ಅತ್ಯುನ್ನತ ಸಂಘಟನೆಗಳಾದ ಅಡ್ವರ್ಟೈಸಿಂಗ್ ಕ್ಲಬ್ ಹಾಗೂ ಇಂಟರ್‍ನ್ಯಾಷನಲ್ ಅಡ್ವರ್ಟೈಸಿಂಗ್ ಅಸೋಸಿಯೇಶನ್ನಿನ ಭಾರತೀಯ ಶಾಖೆ,   ಘಟನೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿವೆ.

ತನಿಷ್ಕ್ ಸಂಸ್ಥೆಯ ಜಾಹೀರಾತು ಯಾವುದೇ ವ್ಯಕ್ತಿ, ಸಂಸ್ಥೆ ಯಾ ಧರ್ಮಕ್ಕೆ ಯಾವುದೇ ರೀತಿಯಲ್ಲಿ ನಿಂದನಾತ್ಮಕವಾಗಿಲ್ಲ ಹಾಗೂ ಅದು ಯಾರ ಭಾವನೆಗೂ ಧಕ್ಕೆ ತರುವುದಿಲ್ಲ ಎಂದು ಅದರ ಪರಿಶೀಲನೆಯಿಂದ ತಿಳಿದು ಬಂದಿದೆ ಎಂದು ಹೇಳಿರುವ ಅಡ್ವರ್ಟೈಸಿಂಗ್ ಕ್ಲಬ್, ``ಸೃಜನಾತ್ಮಕ ಅಭಿವ್ಯಕ್ತಿಗೆ ಈ ರೀತಿಯಾಗಿ ಆಧಾರರಹಿತವಾಗಿ ನಡೆಸಲಾದ ಅಪ್ರಸ್ತುತ ದಾಳಿ ಕಳವಳಕಾರಿ,'' ಎಂದು  ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ತನಿಷ್ಕ್ ಸಂಸ್ಥೆ ತನ್ನ ಜಾಹೀರಾತು  ವಾಪಸ್ ಪಡೆಯುವುದಕ್ಕೆ ಕಾರಣವಾದ ಘಟನಾವಳಿಗಳು "ಬಹಳ ದುರದೃಷ್ಟಕರ'' ಎಂದು ಬಣ್ಣಿಸಿರುವ ಇಂಟರ್ ನ್ಯಾಷನಲ್ ಅಡ್ವರ್ಟೈಸಿಂಗ್ ಅಸೋಸಿಯೇಶನ್‍ನ ಭಾರತೀಯ ಶಾಖೆ, ನರೇಂದ್ರ ಮೋದಿ ಸರಕಾರ ಇಂತಹ ಬೆದರಿಕೆ ತಂತ್ರಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

"ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯವನ್ನು ನಾವು ಗೌರವಿಸುತ್ತೇವೆ ಆದರೆ ಈ ರೀತಿ ಅಕ್ರಮವಾಗಿ ಬೆದರಿಕೆಯೊಡ್ಡುವುದು ಹಾಗೂ ಅನಾಗರಿಕವಾಗಿ ವರ್ತಿಸುವುದು ಸರಿಯಲ್ಲ. ಇಂತಹ ಕೃತ್ಯಗಳ ವಿರುದ್ಧ ಕ್ರಮ ಕೈಗೊಂಡು ಉದ್ದಿಮೆಗಳು ತಮ್ಮ ಜಾಹೀರಾತುಗಳ ಮೂಲಕ ತಮ್ಮ ಉತ್ಪನ್ನಗಳ ಕುರಿತಾದ ಸಂದೇಶಗಳನ್ನು ನೀಡಲು ಸುರಕ್ಷಿತ ವಾತಾವರಣ ಒದಗಿಸಬೇಕು,'' ಎಂದು ಅಸೋಸಿಯೇಶನ್ ಸರಕಾರವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News