ಡ್ರಗ್ಸ್ ಪ್ರಕರಣ: ವಿವೇಕ್ ಒಬೆರಾಯ್ ಮನೆ ಶೋಧಿಸಿದ ಬೆಂಗಳೂರು ಪೊಲೀಸರು
ಮುಂಬೈ/ಬೆಂಗಳೂರು, ಅ.15: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮುಂಬೈ ನಿವಾಸದ ಮೇಲೆ ಸಿಸಿಬಿ ಪೊಲೀಸರು ಗುರುವಾರ ಏಕಾಏಕಿ ದಾಳಿ ನಡೆಸಿದರು.
ಇಲ್ಲಿನ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆದಿತ್ಯ ಆಳ್ವ ಆರನೇ ಆರೋಪಿಯಾಗಿದ್ದು, ಈತ ತಲೆಮರೆಸಿಕೊಳ್ಳಲು ನಟ ವಿವೇಕ್ ಒಬೆರಾಯ್ ದಂಪತಿ ಸಹಕಾರ ನೀಡಿರುವ ಶಂಕೆ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ತನಿಖಾಧಿಕಾರಿಗಳೊಂದಿಗೆ ವಾಗ್ವಾದ: ಪೊಲೀಸರ ಶೋಧ ಕಾರ್ಯಕ್ಕೂ ಮುನ್ನ ಆದಿತ್ಯ ಆಳ್ವ ಸಂಬಂಧಿಯಾದ ವಿವೇಕ್ ಒಬೆರಾಯ್, ಪತ್ನಿ ಪ್ರಿಯಾಂಕಾ ಆಳ್ವ, ತನಿಖಾಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು ಎನ್ನಲಾಗಿದೆ.
ಈ ವೇಳೆ ಅಧಿಕಾರಿಗಳು ಡ್ರಗ್ಸ್ ಪ್ರಕರಣದ ಗಂಭೀರತೆ ಬಗ್ಗೆ ಮನವೊಲಿಸಿದ ನಂತರ ಪರಿಶೀಲನೆ ನಡೆಸಲು ಅನುವು ಮಾಡಿಕೊಟ್ಟರು. ಆದರೆ, ಆದಿತ್ಯ ಆಳ್ವ ಕುರಿತು ಯಾವೊಂದು ಪ್ರಶ್ನೆಗೂ ದಂಪತಿ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ.
ಮೊಬೈಲ್ ನೀಡದ ವಿವೇಕ್ ?
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೊಬೈಲ್ ವಶಕ್ಕೆ ನೀಡುವಂತೆ ಸಿಸಿಬಿ ಪೊಲೀಸರು ಕೋರಿದರೂ, ನಟ ವಿವೇಕ್ ಒಬೆರಾಯ್ ಮೊಬೈಲ್ ನೀಡಿಲ್ಲ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.
ಸರ್ಚ್ ವಾರೆಂಟ್ ಪಡೆದು ಶೋಧ
ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಕಾರ್ಯ ಮುಂದುವರಿದಿದ್ದು, ಪ್ರಮುಖ ಆರೋಪಿ ಆದಿತ್ಯ ಆಳ್ವ ಮುಂಬೈನಲ್ಲಿರುವ ಸಂಬಂಧಿಕರ ಮನೆಯಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿಯೇ, ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಪರಿಶೀಲನೆ ನಡೆಸಿದ್ದೇವೆ.
-ಸಂದೀಪ್ ಪಾಟೀಲ್, ಸಿಸಿಬಿ ಜಂಟಿ ಆಯುಕ್ತ