ಮಣಿಪಾಲ: ನಿಷೇಧಿತ ಮಾದಕ ವಸ್ತು ವಶ; ಸೊತ್ತು ಸಹಿತ ಆರೋಪಿ ಸೆರೆ
ಉಡುಪಿ, ಅ.15: ಮಣಿಪಾಲದ ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತಿದ್ದ ಯುವಕನೊಬ್ಬನನ್ನು ಮಣಿಪಾಲ ಪೊಲೀಸರು ಬುಧವಾರ ಸಂಜೆ ಮಣಿಪಾಲದ ಎಂಡ್‌ಪಾಯಿಂಟ್ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಬಂಧಿತ ಯುವಕನನ್ನು ಬ್ರಹ್ಮಾವರದ ಮಹಮ್ಮದ್ ಫಝಲ್ ಎಂದು ಗುರುತಿಸಲಾಗಿದೆ. ಈತ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಮಣಿಪಾಲದ ಆರ್‌ಟಿಒ ಕಚೇರಿ ರಸ್ತೆಯ ಎಂಡ್‌ಪಾಯಿಂಟ್ ಬಳಿ ಮಣಿಪಾಲ ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಎಂಡಿಎಂಎ ಮಾತ್ರೆ, ಬ್ರೌನ್‌ಶುಗರ್ ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತಿದ್ದಾಗ ಪೊಲೀಸರ ಬಲೆಗೆ ಬಿದ್ದಿರುವುದಾಗಿ ತಿಳಿದುಬಂದಿದೆ.
ತಾನು ಸ್ನೇಹಿತರಾದ ಉಡುಪಿಯ ಫರ್ಹಾನ್ ಹಾಗೂ ಸಫಾ ಜೊತೆಗೆ ಸೇರಿ ಕೆಲವು ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್‌ಶುಗರ್‌ನ್ನು ಆನ್‌ಲೈನ್‌ನಲ್ಲಿ ಆರ್ಡರ್ ಕೊಟ್ಟು ತರಿಸಿಕೊಂಡಿದ್ದು, ಅವರಿಬ್ಬರಿಗಾಗಿ ಇಲ್ಲಿ ಕಾಯುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಇವುಗಳನ್ನು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿರುವುದಾಗಿಯೂ ಆತ ಪೊಲೀಸರಿಗೆ ತಿಳಿಸಿದ್ದಾನೆ.
ಫಝಲ್‌ನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಆತನ ಬಳಿ ಇದ್ದ ಎರಡು ಮೊಬೈಲ್ ಫೋನ್‌ಗಳು, 54 ನಿಷೇಧಿತ ಎಂಡಿಎಂಎ ಮಾತ್ರೆ ಗಳು, 30 ಗ್ರಾಂ ಬ್ರೌನ್‌ಶುಗರ್ ಸೇರಿ ಅಂದಾಜು 4,62,000 ರೂ. ಮೌಲ್ಯದ ಸೊತ್ತುಗಳು, ಚುನಾವಣಾ ಗುರುತು ಚೀಟಿ, ಡೆಬಿಟ್ ಕಾರ್ಡ್‌ಗಳು, ಅಂಚೆ ಇಲಾಖೆಯ ಇಂಟಿಮೇಷನ್ ಸ್ಲಿಪ್‌ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.