×
Ad

"ಮುಸ್ಲಿಂ ರೆಜಿಮೆಂಟ್ ಎಂಬುದು ಇರಲೇ ಇಲ್ಲ"

Update: 2020-10-15 17:14 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಮುಸ್ಲಿಂ ಸೈನಿಕರನ್ನು ಅವಮಾನಿಸುವ ಪೋಸ್ಟ್ ಒಂದು ವ್ಯಾಪಕವಾಗಿ ಹರಿದಾಡುತ್ತಿರುವ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ 120 ನಿವೃತ್ತ ಅಧಿಕಾರಿಗಳ ತಂಡವೊಂದು ಇಂತಹ ಪೋಸ್ಟ್ ಗಳು ದೇಶದಲ್ಲಿ ಕೋಮು ದ್ವೇಷ ಹರಡಲು ಆಸ್ಪದ ನೀಡುವ ಜತೆಗೆ ನಮ್ಮ ಸೇನಾ ಪಡೆಗಳ ನೈತಿಕ ಸ್ಥೈರ್ಯವನ್ನೂ ಕುಸಿಯುವಂತೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಪಾಕಿಸ್ತಾನದ ಜತೆಗಿನ 1965ರ ಯುದ್ಧದಲ್ಲಿ ಹೋರಾಡಲು ನಿರಾಕರಿಸಿದ ನಂತರ 'ಮುಸ್ಲಿಂ ರೆಜಿಮೆಂಟ್' ಒಂದನ್ನು ವಿಸರ್ಜಿಸಿತ್ತು ಎನ್ನುವುದು ನಕಲಿ ಪೋಸ್ಟ್, ಇವುಗಳಲ್ಲಿ ಸುಳ್ಳುಗಳೇ ತುಂಬಿವೆ ಎಂದು ಈ ನಿವೃತ್ತ ಸೈನಿಕರು ಅಕ್ಟೋಬರ್ 14ರಂದು ಬರೆದ ಪತ್ರದಲ್ಲಿ ಹೇಳಿದ್ದು ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮಂದಿ ಶೇರ್ ಮಾಡಿದ್ದಾರೆ.

ಮೇ 2013ರಿಂದ ಫೇಸ್ ಬುಕ್ ಹಾಗೂ ಟ್ವಿಟ್ಟರ್‍ನಲ್ಲಿರುವ ನಕಲಿ ಖಾತೆಯನ್ನು ಇತ್ತೀಚಿಗಿನ ಭಾರತ-ಚೀನಾ ಗಡಿ ಉದ್ವಿಗ್ನತೆಯ ನಡುವೆ ಮತ್ತೆ  ಸಕ್ರಿಯಗೊಳಿಸಲಾಗಿದೆ ಎಂದು ಮೂರು ಸೇನಾ ಪಡೆಗಳ ಮುಖ್ಯಸ್ಥರನ್ನೂ ಉದ್ದೇಶಿಸಿ ಬರೆಯಲಾಗಿರುವ ಪತ್ರದಲ್ಲಿ ಹೇಳಲಾಗಿದೆ.

ಈ ಪತ್ರಕ್ಕೆ ಸಹಿ ಹಾಕಿದವರಲ್ಲಿ ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾ ಪಡೆಯ ಮಾಜಿ ಅಧಿಕಾರಿಗಳೂ ಸೇರಿದ್ದಾರೆ. ``ನಮ್ಮ ದೇಶದ ವಿರುದ್ಧ ದ್ವೇಷ ಕಾರುವ ಶಕ್ತಿಗಳು ಆ ಪೋಸ್ಟ್ ಮೂಲಕ ಸುಳ್ಳು ಹರಡುತ್ತಿದ್ದು ಇದು ದೇಶದ ಭದ್ರತೆ ಹಾಗೂ ನೈತಿಕ ಸ್ಥೈರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದಿದ್ದಾರೆ.

ಆ ದ್ವೇಷಪೂರಿತ ಪೋಸ್ಟ್ ಕುರಿತು ಉಲ್ಲೇಖಿಸಿದ ಅಧಿಕಾರಿಗಳು,"ಭಾರತೀಯ ಸೇನೆಯಲ್ಲಿ 1965ರಲ್ಲಿ ಹಾಗೂ ನಂತರ ಮುಸ್ಲಿಂ ರೆಜಿಮೆಂಟ್ ಎಂಬುದು ಇಲ್ಲ,  ವಿವಿಧ ವರ್ಗಗಳಿರುವ ರೆಜಿಮೆಂಟ್‍ಗಳ ಭಾಗವಾಗಿರುವ ಮುಸ್ಲಿಮರು ತಮ್ಮ ದೇಶದ  ಮೇಲೆ ತಮ್ಮ ಸಂಪೂರ್ಣ ಬದ್ಧತೆಯನ್ನು ಸಾಬೀತುಪಡಿಸಿದ್ದಾರೆ,'' ಎಂದು ಬರೆದಿದ್ದಾರಲ್ಲದೆ, ಹವಾಲ್ದಾರ್ ಅಬ್ದುಲ್ ಹಮೀದ್ ಹಾಗೂ 1965ರಲ್ಲಿ ತಮ್ಮದೇ ಚಿಕ್ಕಪ್ಪನ ನೇತೃತ್ವದ ಪಾಕಿಸ್ತಾನಿ ಡಿವಿಷನ್ ವಿರುದ್ಧ ಹೋರಾಡಿ ಹುತಾತ್ಮರಾದ  ಪರಮ್ ವೀರ್ ಚಕ್ರ ಹಾಗೂ ಮೇಜರ್ ಅಬ್ದುಲ್ ರಫೇ ಖಾನ್ ಅವರ ಉದಾಹರಣೆಗಳನ್ನು ನೀಡಿದ್ದಾರೆ.

"ಮುಸ್ಲಿಂ ಸೈನಿಕರು... ಹೋರಾಡಲು ನಿರಾಕರಿಸಿದ್ದಾರೆ... ಎಂದು ಹೇಳುವುದು ಎಲ್ಲಾ ಸೇವೆಯಲ್ಲಿರುವ ಹಾಗೂ ನಿವೃತ್ತ ಸೈನಿಕರ ನಿಷ್ಠೆಯನ್ನೇ ಪ್ರಶ್ನಿಸುತ್ತದೆ ಹಾಗೂ ಅವರನ್ನು ಅವಮಾನಿಸುತ್ತದೆ ಮತ್ತು ಭಾರತದ ಸೈನಿಕರ ನೈತಿಕ ಸ್ಥೈರ್ಯಕ್ಕೆ ಹೊಡೆತ ನೀಡಿ ವೈರಿಗೆ ಸಹಾಯ ಮಾಡುತ್ತದೆ ಎಂದು ನಿವೃತ್ತ ಅಧಿಕಾರಿಗಳು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News