×
Ad

ಹತ್ರಸ್ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆ ನಡೆಸಲಿದೆ: ಸುಪ್ರೀಂಕೋರ್ಟ್

Update: 2020-10-15 17:47 IST

ಹೊಸದಿಲ್ಲಿ: ಉತ್ತರಪ್ರದೇಶದ ಹತ್ರಸ್ ನಲ್ಲಿ   19ರ ಹರೆಯದ ದಲಿತ ಯುವತಿಯ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎಸ್.ಎ.ಬೋಬ್ಡೆ ನೇತೃತ್ವದ ಪೀಠದ ಎದುರು ನಡೆದ ವಿಚಾರಣೆಯ ವೇಳೆ ಸಂತ್ರಸ್ತೆಯ ಕುಟುಂಬದ ಪರ ಹಾಜರಾದ ವಕೀಲೆ ಸೀಮಾ ಕುಶ್ವಾಹ ಪ್ರಕರಣದ ವಿಚಾರಣೆಯನ್ನು ಉತ್ತರಪ್ರದೇಶದಿಂದ ರಾಷ್ಟ್ರ ರಾಜಧಾನಿಯ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು.

ತನಿಖೆ ಮುಗಿದ ನಂತರ ದಿಲ್ಲಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು. ತನಿಖೆಯ ಸ್ಥಿತಿಗತಿ ವರದಿಯನ್ನು ನೇರವಾಗಿ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಬೇಕು ಎಂದು  ವಕೀಲೆ ಸೀಮಾ ಕುಶ್ವಾಹ ನ್ಯಾಯಾಲಯವನ್ನು ಕೋರಿದರು.

ಸಂತ್ರಸ್ತೆಯ ಪರ ವಕೀಲರ ಆತಂಕವನ್ನು ನಿವಾರಿಸಲು ಮುಂದಾದ ಸಿಜೆಐ ಬೋಬ್ಡೆ, "ಹೈಕೋರ್ಟ್ ಇದರ ಮೇಲ್ಚಿಚಾರಣೆಯನ್ನು ನಿಭಾಯಿಸಲಿದೆ. ಏನಾದರೂ ಸಮಸ್ಯೆ ಇದ್ದರೆ ನಾವು ಇಲ್ಲಿದ್ದೇವೆ'' ಎಂದರು.

ಉತ್ತರಪ್ರದೇಶ ಸರಕಾರ ಸಲ್ಲಿಸಿರುವ ಅಫಿಡವಿಟ್ ನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉಲ್ಲೇಖಿಸುವುದರೊಂದಿಗೆ ವಿಚಾರಣೆ ಆರಂಭವಾಯಿತು. ಸಂತ್ರಸ್ತೆಯ ಕುಟುಂಬಕ್ಕೆ ಮೂರು ಸ್ತರದ ಭದ್ರತೆಯನ್ನು ನೀಡಲಾಗುವುದು ಎಂದು ಉತ್ತರಪ್ರದೇಶ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News