ಮುರಳೀಧರನ್ ಕುರಿತ ಚಿತ್ರದಲ್ಲಿ ನಟಿಸದಿರಿ, ಆತನೊಬ್ಬ ದ್ರೋಹಿ: ವಿಜಯ್ ಸೇತುಪತಿಗೆ ಹೇಳಿದ ಭಾರತಿರಾಜ
ಚೆನ್ನೈ: ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಥರನ್ ಅವರ ಜೀವನಾಧರಿತ, ನಟ ವಿಜಯ್ ಸೇತುಪತಿ ಅವರ ಮುಂಬರುವ ಚಿತ್ರ `800' ಈಗಾಗಲೇ ಹಲವರ ವಿರೋಧ ಎದುರಿಸುತ್ತಿದೆ. ಇದೀಗ ಖ್ಯಾತ ನಿರ್ದೇಶಕ ಭಾರತಿರಾಜ ಕೂಡ ಈ ಕುರಿತು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಜಯ್ ಸೇತುಪತಿಗೆ ಬಹಿರಂಗ ಪತ್ರವನ್ನೂ ಅವರು ಬರೆದಿದ್ದಾರೆ. 'ಜಗತ್ತಿನಾದ್ಯಂತ ಇರುವ ತಮಿಳು ಜನರ ಪರವಾಗಿ' ಎಂಬ ಒಕ್ಕಣೆಯೊಂದಿಗೆ ಬರೆದಿರುವ ಈ ಪತ್ರದಲ್ಲಿ ''ಜನಾಂಗೀಯವಾದಿ ವ್ಯಕ್ತಿಯೊಬ್ಬನ ಜತೆಗೆ ನಿಮ್ಮ ಮುಖ ಸದಾ ಗುರುತಿಸಬೇಕೆಂದು ಹಾಗೂ ಜನರು ಸದಾ ನಿಮ್ಮ ಮುಖವನ್ನು ದ್ವೇಷದಿಂದ ನೋಡಬೇಕೆಂದು ನೀವು ಬಯಸಿದ್ದೀರಾ?,''ಎಂದು ಭಾರತೀರಾಜ ಅವರು ಸೇತುಪತಿಯನ್ನು ಪ್ರಶ್ನಿಸಿದ್ದಾರೆ.
''ತಮಿಳರನ್ನು ದ್ವೇಷಿಸುವ ವ್ಯಕ್ತಿಯ ಜೀವನಾಧರಿತ ಚಿತ್ರದ ಭಾಗವಾಗುವುದನ್ನು ನಿವಾರಿಸಿ. ನೀವು ಇದೇ ರೀತಿ ಮಾಡಿದರೆ ಈಳಂ ಜನರು ಹಾಗೂ ನನ್ನ ಹೃದಯದಲ್ಲಿ ನಿಮ್ಮನ್ನು ಸದಾ ಕೃತಜ್ಞತಾ ಭಾವದಿಂದ ನೋಡಲಾಗುವುದು'' ಎಂದೂ ಭಾರತಿರಾಜ ಬರೆದಿದ್ದಾರೆ.
''ಈಳಂನ ನಮ್ಮ ಮಕ್ಕಳು ಸತ್ತಾಗ ಮುತ್ತಯ್ಯ ಅವರು ಪಿಟೀಲು ಬಾರಿಸಿದರು. ಅವರು ಶ್ರೀಲಂಕಾ ಜನರ ಜನಾಂಗೀಯತೆಯನ್ನು ಸಂಪೂರ್ಣವಾಗಿ ಬೆಂಬಲಿಸಿದರು. ಅವರು ಕ್ರಿಕೆಟಿಗರಾಗಿ ಎಷ್ಟೇ ಸಾಧನೆ ಮಾಡಿದ್ದರೂ, ನಮ್ಮ ಜನರು ಸತ್ತಾಗ ನಕ್ಕು ಖುಷಿ ಪಟ್ಟಿದ್ದರಿಂದ ಅದರೆದುರು ಆ ಸಾಧನೆಗಳು ನಗಣ್ಯ. ನಮ್ಮ ಪ್ರಕಾರ ಮುತ್ತಯ್ಯ ಮುರಳೀಧರನ್ ಕೂಡ ಒಬ್ಬ ದ್ರೋಹಿ,'' ಎಂದಿದ್ದಾರೆ.
ಇದು ಕೇವಲ ಒಂದು ಕ್ರೀಡಾಳುವಿನ ಜೀವನ ಕಥೆ. ಅದನ್ನು ಅನಗತ್ಯವಾಗಿ ರಾಜಕೀಯಗೊಳಿಸಲಾಗುತ್ತಿದೆ ಎಂದು ಚಿತ್ರದ ನಿರ್ಮಾಣ ಸಂಸ್ಥೆ ಡರ್ ಮೋಷನ್ ಪಿಕ್ಚರ್ಸ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಭಾರತಿರಾಜ, ''ನಿಮಗೆ ಅವರೊಬ್ಬ ಮಹಾನ್ ಕ್ರೀಡಾಳು ಆಗಿರಬಹುದು. ಆದರೆ ಅವರು ನಮಗೆ ಒಂದು ಜನಾಂಗಕ್ಕೆ ದ್ರೋಹ ಬಗೆದವರು,'' ಎಂದಿದ್ದಾರಲ್ಲದೆ ಸಂಸ್ಥೆ ತಮಿಳು ಈಳಂ ಕ್ರಾಂತಿವಾದಿಗಳಾದ ದಿಲೀಪನ್ ಅವರಂತಹವರ ಜೀವನಾಧರಿತ ಚಲನಚಿತ್ರ ನಿರ್ಮಿಸಬೇಕೆಂದೂ ಸಲಹೆ ನೀಡಿದ್ದಾರೆ.