ಬಂಧಿತ ಕ್ಯಾಂಪಸ್ ಫ್ರಂಟ್ ಮುಖಂಡರು ಅಮಾಯಕರು, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು : ಇರ್ಶಾದ್ ಕಾವು
ಮಂಗಳೂರು, ಅ.15: ಉತ್ತರ ಪ್ರದೇಶದ ಹತ್ರಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಲು ತೆರಳಿದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಪ್ರಮುಖರನ್ನು ಹಾಗೂ ಇತರರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದು ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ಒತ್ತಾಯಿಸಿದೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಇರ್ಶಾದ್ ಕಾವು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಅತೀಕೂರ್ ರಹ್ಮಾನ್, ಮಸೂದ್ ಖಾನ್ ಮತ್ತು ಪತ್ರಕರ್ತ ಸಿದ್ಧೀಕ್ ಕಪ್ಪನ್ ಹಾಗೂ ಚಾಲಕ ಆಲಂ ಎಂಬವರನ್ನು ಬಂಧಿಸಿ ದೇಶದ್ರೋಹದ ಆರೋಪ ಹೊರಿಸಿ ಗಂಭೀರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಬಂಧಿತರು ಅಮಾಯಕರಾಗಿದ್ದು ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು, ಅವರ ಮೇಲೆ ದಾಖಲಾಗಿರುವ ಕಠಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಆದಿತ್ಯನಾಥ್ ಸರಕಾರವು ಅತ್ಯಾಚಾರಿಗಳನ್ನು ರಕ್ಷಿಸಲು ಸಂಚು ರೂಪಿಸಿದೆ. ಆದರೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಯಾವುದೇ ಬೆದರಿಕೆಗೆ ಹಿಂಜರಿಯುವುದಿಲ್ಲ ಎಂದು ಇರ್ಶಾದ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯದರ್ಶಿ ಅಶ್ವಾನ್ ಸಾದಿಕ್, ರಾಜ್ಯ ಸಮಿತಿ ಸದಸ್ಯ ಅ್ತಾಫ್ ಹೊಸಪೇಟೆ ಉಪಸ್ಥಿತರಿದ್ದರು.