ಭಾರತದ ಮೊದಲ ಆಸ್ಕರ್ ಪ್ರಶಸ್ತಿ ವಿಜೇತೆ ಭಾನು ಅಥೈಯಾ ನಿಧನ
ಮುಂಬೈ, ಅ.15: ಭಾರತದ ಪ್ರಪ್ರಥಮ ಆಸ್ಕರ್ ಪ್ರಶಸ್ತಿ ವಿಜೇತೆ, ವಸ್ತ್ರ ವಿನ್ಯಾಸಕಿ ಭಾನು ಆತೈಯಾ ಅವರು ಗುರುವಾರ ಸೃಗೃಹದಲ್ಲಿ ನಿಧನರಾಗಿದ್ದಾರೆ. 91 ವರ್ಷದ ಅತೈಯಾ ಅವರು ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದರು. 1983ರಲ್ಲಿ ‘ಗಾಂಧಿ’ ಚಿತ್ರದ ವಸ್ತ್ರವಿನ್ಯಾಸಕ್ಕಾಗಿ ಅವರಿಗೆ ಆಸ್ಕರ್ ಪ್ರಶಸ್ತಿ ದೊರೆತಿತ್ತು.
ಎಂಟು ವರ್ಷಗಳ ಹಿಂದೆ ಭಾನು ಅತೈಯಾ ಅವರ ಮೆದುಳಿನಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು. ಕಳೆದ ಮೂರು ವರ್ಷಗಳಿಂದ ಅವರು ಪಾರ್ಶ್ವವಾಯು ಪೀಡಿತರಾಗಿ, ಹಾಸಿಗೆ ಹಿಡಿದಿದ್ದರೆಂದು ಪುತ್ರಿ ರಾಧಿಕಾ ಗುಪ್ತಾ ತಿಳಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜನಿಸಿದ ಭಾನು ಅತೈಯಾ, 1956ರಲ್ಲಿ ಬಿಡುಗಡೆಯಾದ ಗುರುದತ್ ಅಭಿನಯದ ಸೂಪರ್‌ಹಿಟ್ ಹಿಂದಿ ಚಿತ್ರ ‘ಸಿಐಡಿ’ ಮೂಲಕ ವಸ್ತ್ರವಿನ್ಯಾಸಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
‘ಗಾಂಧಿ’ ಚಿತ್ರದ ವಸ್ತ್ರವಿನ್ಯಾಸಕಿಯಾಗಿದ್ದ ಅವರು, ಚಿತ್ರದ ಇನ್ನೋರ್ವ ವಸ್ತ್ರ ವಿನ್ಯಾಸಕಾರ ಜಾನ್ ಮೊಲ್ಲೋ ಜೊತೆ ಆಸ್ಕರ್ ಪುರಸ್ಕಾರ ಹಂಚಿಕೊಂಡಿದ್ದರು. ತನಗೆ ದೊರೆತಿದ್ದ ಆಸ್ಕರ್ ಪ್ರಶಸ್ತಿಯನ್ನು ಸುರಕ್ಷಿತವಾಗಿರಿಸುವ ಉದ್ದೇಶದಿಂದ ಅದನ್ನು , ಪ್ರಶಸ್ತಿದಾತ ಸಂಸ್ಥೆಯಾದ ‘ಅಕಾಡಮಿ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸಯನ್ಸ್ ’ಗೆ ಮರಳಿಸಿದ್ದರು.
ತನ್ನ ಐದು ದಶಕಗಳ ವೃತ್ತಿಬದುಕಿನಲ್ಲಿ ಅತೈಯಾ ಅವರು 100ಕ್ಕೂ ಅಧಿಕ ಚಿತ್ರಗಳಿಗೆ ವಸ್ತ್ರವಿನ್ಯಾಸಕಿಯಾಗಿದ್ದರು. ಗುಲ್ಜಾರ್ ನಿರ್ದೇಶನದ ಲೇಕಿನ್ (1990) ಹಾಗೂ ಅಶುತೋಷ್ ಗೋವಾರಿಕರ್ ನಿರ್ದೇಶನದ ಲಗಾನ್ (2001) ಚಿತ್ರಗಳಿಗಾಗಿ ಅವರಿಗೆ ರಾಷ್ಟ್ರಪ್ರಶಸ್ತಿಗಳು ಲಭಿಸಿದ್ದವು.