ಆಹಾರ ಕಿಟ್‌ನಲ್ಲಿ ಅವ್ಯವಹಾರ : ಕಾರ್ಕಳ ಶಾಸಕ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

Update: 2020-10-15 14:46 GMT

ಕಾರ್ಕಳ, ಅ.15: ಕೋವಿಡ್‌ನಂಥ ಸಂಕಷ್ಟದ ಸಂದರ್ಭದಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಸಹಾಯವಾಗಲೆಂದು ಕರ್ನಾಟಕ ಕಟ್ಟಡ ಕಾರ್ಮಿಕ ಇಲಾಖೆಯು ಕಾರ್ಕಳಕ್ಕೆ 44,95,000 ರೂ. ಮೌಲ್ಯದ 5000 ಆಹಾರ ಕಿಟ್ ಗಳನ್ನು ಬಿಡುಗಡೆಗೊಳಿಸಿದ್ದು, ಈ ಆಹಾರ ಕಿಟ್‌ಗಳನ್ನು ಯಾರೊಬ್ಬರಿಗೂ ವಿತರಿಸಿದೇ, ಬೋಗಸ್ ಪಟ್ಟಿಯನ್ನು ತಯಾರಿಸಿ ಭ್ರಷ್ಟಾಚಾರ ನಡೆಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ರಾಜ್ಯ ಲೋಕಾಯುಕ್ತಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಶಾಸಕ ಸುನಿಲ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಮತ್ತು ತಾಲೂಕು ಕಾರ್ಮಿಕ ಅಧಿಕಾರಿ ಅವರ ವಿರುದ್ಧ ರಾಜ್ಯ ಲೋಕಾಯುಕ್ತರಿಗೆ ಅವರ ಕಚೇರಿಯಲ್ಲಿ ಭೇಟಿ ಮಾಡಿ ದೂರು ಸಲ್ಲಿಸಲಾಗಿದೆ ಎಂದು ಶುಭದ ರಾವ್ ತಿಳಿಸಿದ್ದಾರೆ.

ಕಾರ್ಮಿಕ ಇಲಾಖೆ ಬಿಡುಗಡೆಗೊಳಿಸಿದ ಅನುದಾನದಲ್ಲಿ ಕಾರ್ಕಳ ಶಾಸಕರು ವಿತರಿಸಿದ್ದಾರೆ ಎಂದು ಸರಕಾರಕ್ಕೆ ಸಲ್ಲಿಸಿದ್ದ ಫಲಾನುಭವಿಗಳ ಪಟ್ಟಿಯಲ್ಲಿ ಸತ್ತವರು ಮತ್ತು ಆಹಾರ ಕಿಟ್‌ನ್ನು ಪಡೆಯದೇ ಇದ್ದವರ ಹೆಸರುಗಳೇ ಇದ್ದು, ಇದೊಂದು ಉದ್ದೇಶಪೂರ್ವಕವಾಗಿ ತಯಾರಿಸಿದ ಬೋಗಸ್ ಪಟ್ಟಿಯಾಗಿದೆ. ಈ ಪಟ್ಟಿಯಲ್ಲಿರುವ ಯಾರೊಬ್ಬರೂ ಕಾರ್ಮಿಕ ಇಲಾಖೆಯ ಆಹಾರ ಕಿಟ್ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಹಣವನ್ನು ಲೂಟಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾರ್ಮಿಕ ಇಲಾಖೆಯವರು ಆಹಾರ ಕಿಟ್ ವಿತರಣೆಯ ಯಾವುದೇ ಕಾರ್ಯಕ್ರಮವನ್ನು ಆಯೋಜಿಸದೆ ಇದ್ದರೂ ಫಲಾನುಭವಿಗಳ ಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿರುವುದು ಮತ್ತು ಆಹಾರ ಕಿಟ್ ವಿತರಣೆಯ ಜವಾಬ್ದಾರಿಯನ್ನು ಹೊಂದಿರುವ ಏಜೆನ್ಸಿಯವರ ಬ್ಯಾಂಕ್ ಖಾತೆಯಿಂದ ಬೃಹತ್ ಮೊತ್ತದ ಹಣವು ಶಾಸಕರ ಆಪ್ತರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುವುದು ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂದೇಹಗಳಿಗೆ ಪುಷ್ಟಿ ನೀಡುತ್ತದೆ ಎಂದು ಶುಭದ ರಾವ್ ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News