ಚೀನಾ ಬದಲು ಅಮೆರಿಕಾದ ಹಾದಿ ಹಿಡಿದ ಭಾರತದ ಸಿಗಡಿ : ರಫ್ತು ಪ್ರಮಾಣದಲ್ಲಿ ಏರಿಕೆ
ಮಂಗಳೂರು, ಅ.15: ಭಾರತದ ಸಿಗಡಿಯು ಚೀನಾದ ಬದಲು ಅಮೇರಿಕಾದ ಹಾದಿ ಹಿಡಿದಿದೆ. ಅದಕ್ಕೆ ಮುಖ್ಯ ಕಾರಣ ಭಾರತ-ಚೀನಾ ನಡು ವಿನ ಹದಗೆಟ್ಟ ವಾತಾವರಣ. ಇತ್ತೀಚಿನ ದಿನಗಳಲ್ಲಿ ಚೀನಾವು ಸದಾ ಕಾಲ ಭಾರತದೊಂದಿಗೆ ಕಾಲೆಳೆಯುವ ಮೂಲಕ ವಿಷಮ ಪರಿಸ್ಥಿತಿ ಸೃಷ್ಟಿಸುತ್ತಿರುವ ಮಧ್ಯೆಯೇ ಸಿಗಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕಾ ಮತ್ತಿತರ ರಾಷ್ಟ್ರಗಳಿಗೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದು ಮೀನುಗಾರಿಕಾ ಕ್ಷೇತ್ರದ ವಹಿವಾಟಿನಲ್ಲಿ ಹೊಸ ಬೆಳವಣಿಗೆಯಾಗಿ ಪರಿಣಮಿಸಿದೆ.
ಭಾರತವು ಪ್ರತಿವರ್ಷ 46 ಸಾವಿರ ಕೋಟಿಯಷ್ಟು ಮೀನು ರಫ್ತಿನ ಪೈಕಿ ಶೇ.70ರಷ್ಟು ಸಿಗಡಿ ಮೀನನ್ನೇ ಚೀನಾಕ್ಕೆ ರ್ತು ಮಾಡಲಾಗುತ್ತಿತ್ತು. ಆದರೆ ಚೀನಾದ ಬದಲು ಅಮೆರಿಕ, ಮಲೇಷ್ಯಾ, ಇಂಡೋನೇಷ್ಯಾ, ಥಾಯ್‌ಲ್ಯಾಂಡ್, ಕೊರಿಯಾ, ಬ್ಯಾಂಕಾಕ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
ಭಾರತ ಹಾಗೂ ಚೀನಾದ ನಡುವಿನ ಸಂಬಂಧ ಉತ್ತಮವಾಗಿರುವಾಗ ದೊಡ್ಡ ಪ್ರಮಾಣದಲ್ಲಿ ಕಪ್ಪೆ ಬೊಂಡಾಸ್, ಪಾಂಬಲ್ ಮೀನು ಸಹಿತ ಸಿಗಡಿ ಮೀನನನ್ನು ರಫ್ತು ಮಾಡಲಾಗುತ್ತಿತ್ತು. ದೇಶದ 2019-20ರಲ್ಲಿ 9617.44 ಕೋ.ರೂ. ಮೌಲ್ಯದ 3,29,479 ಟನ್‌ಗಳಷ್ಟು ಸಿಗಡಿಯು ಚೀನಾಕ್ಕೆ ರಫ್ತು ಆಗಿತ್ತು. ಆದರೆ ಚೀನಾದ ನಡುವಿನ ಸಂಬಂಧ ಹದಗೆಡುತ್ತಿದ್ದಂತೆಯೇ ಭಾರತವು ಅಮೆರಿಕದ ಕಡೆಗೆ ರಫ್ತು ವಹಿವಾಟಿಗೆ ಆಸಕ್ತಿ ಬೆಳೆಸಿದೆ.
ಸಿಹಿ ನೀರಿನಲ್ಲಿ ಸಾಕುವ ಸಿಗಡಿ ಮೀನನ್ನು ಮೌಲ್ಯವರ್ಧನೆ ಮಾಡಿಕೊಂಡು ಅಮೆರಿಕಕ್ಕೆ ರಫ್ತು ಮಾಡುವ ಕೆಲಸ ಪ್ರಗತಿಯಲ್ಲಿದೆ. ಚೀನಾದ ಬದಲು ಶೇ.40ರಷ್ಟು ಸಿಗಡಿ ಮೀನು ಅಮೆರಿಕಕ್ಕೆ ದೇಶದ ಪ್ರಮುಖ ಬಂದರುಗಳ ಮೂಲಕ ರಫ್ತು ನಡೆಸುವ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಕೇಂದ್ರ ಮರೈನ್ ಪ್ರಾಡಕ್ಟ್ ಎಕ್ಸ್‌ಪೋರ್ಟ್ ಡೆವಲಪ್‌ಮೆಂಟ್ ಅಥಾರಿಟಿ ಕೂಡ ದೃಢೀಕರಿಸಿದೆ.
ಮಂಗಳೂರು, ತಿರುವನಂತಪುರ, ಮುಂಬೈ, ಗೋವಾದ ಬಂದರು ಸಹಿತ ದೇಶದ ಹತ್ತಕ್ಕೂ ಅಧಿಕ ಬಂದರುಗಳು ಸೀ ಫುಡ್ ರಫ್ತು ಮಾಡುವ ಕಾರ್ಯ ಮಾಡುತ್ತಿದೆ. ಮೈನಸ್ 18-20 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಈ ಮೀನಿನ ರಫ್ತು ಕಾರ್ಯ ನಡೆಯುತ್ತಿರುವುದು ವಿಶೇಷ. ಈ ಹಿಂದೆ ಚೀನಾವು ಭಾರತದ ಮೀನುಗಳನ್ನು ಖರೀದಿ ಮಾಡಿ ಅಲ್ಲಿ ಮೌಲ್ಯವರ್ಧನೆ ಮಾಡಿ ಬಳಿಕ ಅಮೆರಿಕಕ್ಕೆ ಮಾರಾಟ ಮಾಡುತ್ತಿತ್ತು. ಭಾರತದ ಮೀನಿನಿಂದ ಚೀನಾ ಲಾಭ ಪಡೆದುಕೊಳ್ಳುತ್ತಿತ್ತು. ಈಗ ಭಾರತಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ಮೀನು ರಫ್ತಿನಲ್ಲಿ ತೊಡಗಿರುವ ನಾರಾಯಣ್ ಖಾರ್ವಿ ಅಭಿಪ್ರಾಯಪಟ್ಟಿದ್ದಾರೆ.
ಚೀನಾಕ್ಕೆ ರಫ್ತು ಮಾಡಲಾಗುತ್ತಿದ್ದ ಪಾಂಬಲ್, ಕಪ್ಪೆ ಬೊಂಡಾಸ್‌ಗಳನ್ನು ಇದೀಗ ಐರೋಪ್ಯ ರಾಷ್ಟ್ರಗಳಿಗೆ ರ್ತು ಆಗುತ್ತಿದೆ. ಆದರೆ ದೊಡ್ಡ ಪ್ರಮಾಣದ ರ್ತು ಮಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಆಗಬೇಕು. ಮಂಗಳೂರಿನಲ್ಲಿ 12, ಉಡುಪಿಯಲ್ಲಿ 10 ಹಾಗೂ ಉತ್ತರ ಕನ್ನಡದಲ್ಲಿ 3 ಮೀನು ರಫ್ತು ಮಾಡುವ ಕೈಗಾರಿಕೆಗಳು ನಡೆಯುತ್ತಿದೆ ಎಂದು ದ.ಕ.ಜಿಲ್ಲಾ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾಶ್ವನಾಥ್ ತಿಳಿಸಿದ್ದಾರೆ.