7 ತಿಂಗಳ ಬಳಿಕ ಮತ್ತೆ ಆರಂಭವಾದ ಚಿತ್ರಮಂದಿರ

Update: 2020-10-15 16:09 GMT

ಹೊಸದಿಲ್ಲಿ, ಅ. 15: ದೇಶದ ಹಲವು ಭಾಗಗಳಲ್ಲಿ ಚಿತ್ರ ಮಂದಿರಗಳು ಗುರುವಾರದಿಂದ ಚಿತ್ರ ಪ್ರದರ್ಶನ ಆರಂಭಿಸಿವೆ. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್‌ನಿಂದ ಕಳೆದ 7 ತಿಂಗಳಿಂದ ದೇಶಾದ್ಯಂತ ಚಿತ್ರ ಮಂದಿರಗಳನ್ನು ಮುಚ್ಚಲಾಗಿತ್ತು.

ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿ ಇನ್ನು ಕೂಡ ಚಿತ್ರ ಮಂದಿರಗಳು ತೆರೆದಿಲ್ಲ. ಆದರೆ, ದಿಲ್ಲಿ, ಮಧ್ಯಪ್ರದೇಶ ಹಾಗೂ ಗುಜರಾತ್‌ನ ಹಲವು ಭಾಗಗಳಲ್ಲಿ ಚಿತ್ರ ಮಂದಿರಗಳು ತೆರೆದಿವೆ. ಆದರೆ, ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿದೆ. ಪಿವಿಆರ್ ಶುಕ್ರವಾರದಿಂದ ಚಿತ್ರ ಪ್ರದರ್ಶನ ಆರಂಭಿಸಲಿದೆ. ಸಿನೆಪೋಲಿಸ್ ಹಾಗೂ ಐನ್ಯಾಕ್ಸ್ ಗುರುವಾರದಿಂದ ಚಿತ್ರ ಪ್ರದರ್ಶನ ಆರಂಭಿಸಿದೆ. ಸ್ಯಾನಿಟೈಸೇಶನ್ ಹಾಗೂ ಸುರಕ್ಷಿತ ಅಂತರ ಸೇರಿದಂತೆ ಸುರಕ್ಷಾ ಕ್ರಮಗಳಿಗೆ ಒತ್ತು ನೀಡಲಾಗಿದೆ.

‘‘ನಾವು ಚಿತ್ರ ಮಂದಿರ ತೆರೆದಿದ್ದೇವೆ. ನೀವು ಇನ್ನು ಮುಂದೆ ದೊಡ್ಡ ಪರದೆಯಲ್ಲಿ ಚಿತ್ರ ನೋಡಬಹುದು. ಆದರೆ, ಮುಂದಿನ ನೋಟಿಸು ಬರುವ ವರೆಗೆ ಕೆಲವು ರಾಜ್ಯಗಳಲ್ಲಿ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯದು’’ ಎಂದು ಸಿನೆಪೋಲಿಸ್ ಇಂಡಿಯಾ ಟ್ವೀಟ್ ಮಾಡಿದೆ.

10 ರಾಜ್ಯಗಳು ಹಾಗೂ 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಅತಿ ದೊಡ್ಡ ಚಿತ್ರ ಪ್ರದರ್ಶನ ಸಂಸ್ಥೆ ಪಿವಿಆರ್ ಸಿನೆಮಾಸ್ ಹೇಳಿದೆ. ಅ. 15ರಿಂದ ಶೇ. 50ರಷ್ಟು ಪ್ರೇಕ್ಷಕರೊಂದಿಗೆ ಚಿತ್ರ ಪದರ್ಶನ ಆರಂಭಿಸಲು ಗೃಹ ಸಚಿವಾಲಯ ಅವಕಾಶ ನೀಡಿದ್ದು, ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News