ವರವರ ರಾವ್ ಬಿಡುಗಡೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪತ್ನಿ

Update: 2020-10-15 16:20 GMT

ಹೊಸದಿಲ್ಲಿ, ಅ.15: ಎಲ್ಗರ್ ಪರಿಷದ್-ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಲ್ಲಿ 2018ರ ಆಗಸ್ಟ್‌ನಿಂದ ಬಂಧನದಲ್ಲಿರುವ ತೆಲುಗು ಕವಿ, ಸಾಹಿತಿ ಡಾ ವರವರ ರಾವ್‌ರನ್ನು ತಕ್ಷಣ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿ ಅವರ ಪತ್ನಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತನ್ನ ಪತಿಯ ಕಸ್ಟಡಿ ಅವಧಿಯನ್ನು ನಿರಂತರ ಮುಂದುವರಿಸುವುದು ಅಮಾನವೀಯ ಮತ್ತು ಕ್ರೌರ್ಯದ ಕ್ರಮವಾಗಿದೆ. ಜೊತೆಗೆ, ಸಂವಿಧಾನದ 21ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ ಎಂದು ವರವರ ರಾವ್ ಪತ್ನಿ ಹೇಮಲತಾ ರಾವ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. 81 ವರ್ಷದ ವರವರ ರಾವ್‌ರನ್ನು ಬಂಧಿಸಿದ ಸಂದರ್ಭ ಅವರಿಗೆ ನರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿಲ್ಲ ಎಂಬುದು 2020ರ ಜುಲೈಯಲ್ಲಿ ನಡೆಸಿದ್ದ ಕೊರೋನ ಪರೀಕ್ಷೆಯಿಂದ ದೃಢಪಟ್ಟಿತ್ತು. ಆದರೆ ಅರ್ಜಿದಾರರ ಪತಿಯ ಆರೋಗ್ಯಸ್ಥಿತಿ ನಿರಂತರ ಕ್ಷೀಣಿಸುತ್ತಿದೆ ಮತ್ತು ಈಗ ವಿವಿಧ ರೀತಿಯ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ . ಜುಲೈಯಲ್ಲಿ ಕೊರೋನ ಸೋಂಕಿನ ಚಿಕಿತ್ಸೆಗಾಗಿ ಮುಂಬೈಯ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದ ರಾವ್‌ರನ್ನು ಪತ್ನಿ ಮತ್ತು ಇಬ್ಬರು ಪುತ್ರಿಯರು ಭೇಟಿಯಾಗಿದ್ದ ಸಂದರ್ಭ ಅವರು ಮೂತ್ರದ ಮಧ್ಯೆಯೇ ಮಲಗಿದ್ದು ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿದ್ದರು. ಅವರನ್ನು ನೋಡಿಕೊಳ್ಳಲು ನರ್ಸ್‌ಗಳೂ ಇರಲಿಲ್ಲ. ಕೊರೋನದಿಂದ ಚೇತರಿಸಿಕೊಂಡ ಅವರನ್ನು ಆಗಸ್ಟ್ 28ರಂದು ಮತ್ತೆ ಜೈಲಿಗೆ ಕಳಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವೈದ್ಯಕೀಯ ಕಾರಣದಿಂದ ರಾವ್‌ಗೆ ಜಾಮೀನು ನೀಡುವಂತೆ ಅವರ ಪತ್ನಿ ಮತ್ತು ಪುತ್ರಿಯರು ನಿರಂತರ ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಕ್ಕೂ ಹಲವು ಬಾರಿ ವಿನಂತಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೂ ಪತ್ರ ಬರೆದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ್ದ ಆಯೋಗ, ರಾವ್‌ರ ಆರೋಗ್ಯದ ಬಗ್ಗೆ ಗಮನ ನೀಡುವಂತೆ ಹಾಗೂ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಖಾತರಿಪಡಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿತ್ತು. ಪುಣೆಯ ಎಲ್ಗರ್ ಪರಿಷದ್‌ನಲ್ಲಿ 2017ರ ಡಿಸೆಂಬರ್ 31ರಂದು ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ವರವರ ರಾವ್ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News