ಚೀನಾಕ್ಕೆ ಹೇಳಿಕೆ ನೀಡುವ ಹಕ್ಕಿಲ್ಲ: ಲಡಾಖ್ ಟೀಕೆ ಕುರಿತು ಭಾರತದ ಪ್ರತಿಕ್ರಿಯೆ

Update: 2020-10-15 17:22 GMT

ಹೊಸದಿಲ್ಲಿ, ಅ. 15: ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿರುವುದು ‘ಅಕ್ರಮ’ ಎಂದ ಚೀನಾದ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಚೀನಾದ ಹೇಳಿಕೆಗೆ ಕಟು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತದ ಆಂತರಿಕ ವಿಚಾರದ ಬಗ್ಗೆ ಹೇಳಿಕೆ ನೀಡಲು ಚೀನಾಕ್ಕೆ ಹಕ್ಕಿಲ್ಲ ಎಂದಿದೆ.

ಈ ವಾರದ ಆರಂಭದಲ್ಲಿ ಗಡಿಯಲ್ಲಿ 44 ಸೇತುವೆ ಉದ್ಘಾಟನೆಯಾದ ಬಳಿಕ ಲಡಾಖ್ ಕುರಿತು ಚೀನಾ ವಕ್ತಾರ ನೀಡಿದ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ, ‘‘ಭಾರತದ ಕಡೆಯಿಂದ ಹಾಗೂ ಅರುಣಾಚಲ ಪ್ರದೇಶದಿಂದ ಅಕ್ರಮವಾಗಿ ರೂಪಿಸಲಾದ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಚೀನಾ ಪರಿಗಣಿಸುವುದಿಲ್ಲ. ಗಡಿ ಪ್ರದೇಶದ ಉದ್ದಕ್ಕೂ ಸೇನಾ ಉದ್ವಿಗ್ನತೆಯ ಉದ್ದೇಶದಿಂದ ಮೂಲಭೂತ ಸೌಕರ್ಯಕಗಳ ಅಭಿವೃದ್ಧಿಯನ್ನು ನಾವು ವಿರೋಧಿಸುತ್ತೇವೆ’’ ಎಂದು ಹೇಳಿದ್ದರು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ, ‘‘ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಹಾಗೂ ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ. ಭಾರತದ ಆಂತರಿಕ ವಿಷಯದ ಬಗ್ಗೆ ಹೇಳಿಕೆ ನೀಡಲು ಚೀನಾಕ್ಕೆ ಹಕ್ಕಿಲ್ಲ’’ ಎಂದಿದ್ದಾರೆ. ‘‘ಅರುಣಾಚಲ ಪ್ರದೇಶದ ಬಗ್ಗೆ ಕೂಡ ನಮ್ಮ ನಿಲುವನ್ನು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಹಾಗೂ ಪ್ರತ್ಯೇಕಿಸಲಾಗದ ಭಾಗ. ಈ ಸತ್ಯವನ್ನು ಹಲವು ಬಾರಿ ಚೀನಾಕ್ಕೆ ಮನವರಿಕೆ ಮಾಡಲಾಗಿದೆ’’ ಎಂದು ಅನುರಾಗ್ ಶ್ರೀವಾತ್ಸವ ತಿಳಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಸರಣಿಯಾಗಿ ನೂತನ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ ಹಿನ್ನೆಲೆಯಲ್ಲಿ ಚೀನಾ ಈ ಹೇಳಿಕೆ ನೀಡಿದೆ. ಪೂರ್ವ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಸೇನಾ ಉದ್ವಿಗ್ನತೆಯನ್ನು ತಗ್ಗಿಸುವ ಪ್ರಯತ್ನ ನಡೆಯುತ್ತಿರುವ ನಡುವೆ ಲಡಾಖ್ ಕುರಿತು ಹೇಳಿಕೆ ನೀಡುವ ಮೂಲಕ ಚೀನಾ ಮತ್ತೆ ವಾಗ್ಯುದ್ಧ ಆರಂಭಿಸಿದೆ.

ಅಕ್ಟೋಬರ್ 12ರಂದು ಕಮಾಂಡರ್ ಮಟ್ಟದ 7ನೇ ಸುತ್ತಿನ ಮಾತುಕತೆ ನಡೆದಿದ್ದು, ಮಾತುಕತೆ ಸಕಾರಾತ್ಮಕ ಹಾಗೂ ರಚನಾತ್ಮಕವಾಗಿತ್ತು ಎಂದು ಭಾರತ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News