ಡೊನಾಲ್ಡ್ ಟ್ರಂಪ್ ಆಡಳಿತ ಅವೆುರಿಕದ ಇತಿಹಾಸದಲ್ಲೇ ‘ಅತಿ ದೊಡ್ಡ ವೈಫಲ್ಯ’: ಕಮಲಾ ಹ್ಯಾರಿಸ್ ಆರೋಪ

Update: 2020-10-15 16:27 GMT

ವಾಶಿಂಗ್ಟನ್, ಅ. 15: ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಡಳಿತವು ಅವೆುರಿಕದ ಇತಿಹಾಸದಲ್ಲೇ ‘ಅತಿ ದೊಡ್ಡ ವೈಫಲ್ಯ’ವಾಗಿದೆ ಎಂದು ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಹೇಳಿದ್ದಾರೆ. ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಟ್ರಂಪ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘‘ಟ್ರಂಪ್‌ರ ವೈಫಲ್ಯದಿಂದಾಗಿ ಕೋಟಿಗಟ್ಟಳೆ ಜನರು ನರಳುತ್ತಿದ್ದಾರೆ. ವಿಜ್ಞಾನವನ್ನು ಅಂಗೀಕರಿಸುವ, ವಾಸ್ತವಾಂಶಗಳು ಮತ್ತು ಸತ್ಯಕ್ಕೆ ಅನುಸಾರವಾಗಿ ನಡೆಯುವ, ಅಮೆರಿಕದ ಜನತೆಗೆ ಸತ್ಯ ನುಡಿಯುವ ಹಾಗೂ ಯೋಜನೆಗಳನ್ನು ರೂಪಿಸುವ ನೂತನ ಅಧ್ಯಕ್ಷರೊಬ್ಬರು ಬೇಕಾಗಿದ್ದಾರೆ’’ ಎಂದು ಬುಧವಾರ ಎಮ್‌ಎಸ್‌ಎನ್‌ಬಿಸಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹ್ಯಾರಿಸ್ ನುಡಿದರು.

‘‘ಟ್ರಂಪ್ ಆಡಳಿತಕ್ಕೆ ಯಾವಾಗ, ಏನು ತಿಳಿಯಿತು ಎಂಬುದನ್ನು ನೋಡುವ. ಜನವರಿ 28ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಕೊರೋನ ವೈರಸ್ ಸಾಂಕ್ರಾಮಿಕದ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಾಂಕ್ರಾಮಿಕ ಅತ್ಯಂತ ಮಾರಕವಾಗಿದೆ, ಅದು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಬಹುದಾಗಿದೆ, ಅದು ಫ್ಲೂ ಜ್ವರಕ್ಕಿಂತ ಐದು ಪಟ್ಟು ಹೆಚ್ಚು ಮಾರಕವಾಗಿದೆ ಹಾಗೂ ಅದು ಗಾಳಿಯಲ್ಲಿ ಇರುತ್ತದೆ ಎಂಬ ಮಾಹಿತಿಗಳನ್ನು ಅವರಿಗೆ ನೀಡಲಾಯಿತು. ಆದರೆ, ಅವರು ಆ ಎಲ್ಲ ಮಾಹಿತಿಗಳನ್ನು ಮುಚ್ಚಿ ಹಾಕಿದರು. ಅವರು ಅದರ ಬಗ್ಗೆ ಅಮೆರಿಕದ ಜನತೆಗೆ ತಿಳಿಸಲಿಲ್ಲ’’ ಎಂದು ಕಮಲಾ ಹ್ಯಾರಿಸ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News