ಆಂಧ್ರಪ್ರದೇಶ, ತೆಲಂಗಾಣದಲ್ಲಿ ಭಾರೀ ಮಳೆ: 30 ಮಂದಿ ಸಾವು

Update: 2020-10-15 16:36 GMT

ಹೈದರಾಬಾದ್, ಅ. 15: ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಮಂಗಳವಾರ ಹಾಗೂ ಬುಧವಾರ ಸುರಿದ ಭಾರೀ ಮಳೆಯಿಂದ ಸಂಭವಿಸಿದ ದುರಂತದಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಮನೆಯ ಛಾವಣಿ ಹಾಗೂ ಗೋಡೆಗಳು ಕುಸಿದಿವೆ. ನೆರೆಯ ಹಿನ್ನೆಲೆಯಲ್ಲಿ 80 ಸಾವಿರಕ್ಕೂ ಅಧಿಕ ಜನರನ್ನು ತೆರೆವುಗೊಳಿಸಲಾಗಿದ್ದು, ಪರಿಹಾರ ಕೇಂದ್ರಗಳಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಭಾರೀ ಮಳೆಗೆ ಹೈದರಾಬಾದ್ ಹಾಗೂ ಅದರ ಉಪ ನಗರಗಳಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ನಾಗರಕುರ್ನೂಲ್ ಜಿಲ್ಲೆಯಲ್ಲಿ ಮನೆ ಕುಸಿದು 3 ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದು ಕನಿಷ್ಠ 10 ಮಂದಿ ಅಸು ನೀಗಿದ್ದಾರೆ. ಹೈದರಾಬಾದ್‌ನ ಹಳೆ ನಗರವಾದ ಬಂಡ್ಲಾಗುಡದಲ್ಲಿ ಮಂಗಳವಾರ ಗೋಡೆ ಕುಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮಕ್ಕಳು ಸೇರಿದಂತೆ 9ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.

 ಬಂಡ್ಲಾಗುಡಾದ ಬೆಟ್ಟದಲ್ಲಿ ಸುಮಾರು 10 ಮನೆಗಳ ಮೇಲೆ ಆವರಣ ಗೋಡೆಯ ಬೃಹತ್ ಗ್ರಾನೈಟ್ ಸ್ಲಾಬ್ ಹಾಗೂ ಬಂಡೆ ಕುಸಿದು ಬಿದ್ದು 8 ಮಂದಿ ಮೃತಪಟ್ಟಿದ್ದಾರೆ. ಇದೇ ಪ್ರದೇಶದ ಫೂಲ್‌ಬಾಗ್‌ನಲ್ಲಿ ಗೋಡೆ ಕುಸಿದು ಓರ್ವ ಸಾವನ್ನಪ್ಪಿದ್ದಾನೆ ಎಂದು ಪಾಲಕ್ನುಮಾ ಪೊಲೀಸ್ ಉಪ ಆಯುಕ್ತ ಎಂ.ಎ. ಮಜೀದ್ ಹೇಳಿದ್ದಾರೆ. ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಗನ್ ಪಹಾಡ್ ಪ್ರದೇಶದಲ್ಲಿ ಮನೆ ಕುಸಿದು ಒಂದೇ ಕುಟುಂಬದ ಮೂವರು ಸದಸ್ಯರು ಮೃತಪಟ್ಟಿದ್ದಾರೆ. ನಗರದ ಹೊರಭಾಗದ ಇಬ್ರಾಹಿಂಪಟ್ನಂನಲ್ಲಿ ಮನೆಯ ಛಾವಣಿ ಕುಸಿದು ಮಹಿಳೆ ಹಾಗೂ ಅವರ 15 ವರ್ಷದ ಪುತ್ರಿ ಸಾವನ್ನಪ್ಪಿದ್ದಾರೆ. ಬಂಜಾರ ಹಿಲ್‌ನಲ್ಲಿ ಗುರುವಾರ ಕ್ಲಿನಿಕ್‌ಗೆ ನುಗ್ಗಿದ ನೀರನ್ನು ಹೊರ ಹಾಕುವ ಸಂದರ್ಭ ವೈದ್ಯರೋರ್ವರು ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ. ಫಾಲಕ್ನುಮಾ ಪ್ರದೇಶದ ಮೈಲಾರದೇವಪಲ್ಲಿಯಲ್ಲಿ ಇಬ್ಬರು ವ್ಯಕ್ತಿಗಳು ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಪೊಲೀಸರು ದೃಢಪಡಿಸಿಲ್ಲ. ನಾಗರಕುರ್ನೂಲು ಜಿಲ್ಲೆಯ ಕುಮ್ಮೇರಾ ಗ್ರಾಮದಲ್ಲಿ ಬುಧವಾರ ಮನೆಯ ಛಾವಣಿ ಕುಸಿದು ಒಂದೇ ಕುಟುಂಬಕ್ಕೆ ಸೇರಿದ ಮೂವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತಂಡಗಳು, ಜಿಎಚ್‌ಎಂಸಿ ಹಾಗೂ ಎನ್‌ಡಿಆರ್‌ಎಫ್‌ನ ವಿಪತ್ತು ಸ್ಪಂದನಾ ತಂಡ (ಡಿಆರ್‌ಎಫ್)ಗಳು ನೆರೆ ಪೀಡಿತ ಹಲವು ಪ್ರದೇಶಗಳಲ್ಲಿರುವ ಕುಟುಂಬಗಳನ್ನು ಸ್ಥಳಾಂತರಗೊಳಿಸಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ ಕೂಡ ಕೈಜೋಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News