ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾಪು ಪುರಸಭೆ ಪ್ರತಿಭಟನೆ

Update: 2020-10-15 17:21 GMT

ಕಾಪು : ಕಾಪು ಪುರಸಭೆ ಮತ್ತು ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಮಂಜೂರುಗೊಂಡಿದ್ದ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ಮಾಡಬೇಕು ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಾಪು ಪುರಸಭೆಯ ಮುಂಭಾಗದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ಹಾಗೂ ಕಾಪು ನಗರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಮಾಜಿ ಸಚಿವ ವಿನಯಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು. ರಾಜೀವ್ ಭವನದಿಂದ ಪುರಸಭೆಯ ವರೆಗೆ ಜಾಥಾ ನಡೆಸಿದ ಪ್ರತಿಭಟನಾಕಾರರು ಪುರಸಭೆ ಹಾಗೂ ಕಾಪು ಶಾಸಕರ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಮಾತನಾಡಿದ ಸೊರಕೆ, ಕಾಪು ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದೇ ಅಧಿಕಾರಿಗಳು  ಶಾಸಕರ ಕೈಗೊಂಬೆಯಂತೆ ವರ್ತಿಸುತಿದ್ದಾರೆ. ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತಿದೆ. ಇಲ್ಲಿಗೆ ಹಿಂದಿನ ಸರಕಾರದ ಅವಧಿಯಲ್ಲಿ ತರಲಾಗಿದ್ದ ಅನುದಾನ ಬೇರೆ ಕ್ಷೇತ್ರಕ್ಕೆ ವರ್ಗಾವಣೆಯಾಗಿದ್ದು, ಇದರಿಂದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂದು ದೂರಿದರು.

ನೀರಿನ ತೆರಿಗೆ, ಮನೆ ಮತ್ತು ವಾಣಿಜ್ಯ ತೆರಿಗೆ, ಮೆಸ್ಕಾಂ ಬಿಲ್, ಪರವಾನಿಗೆ ಶುಲ್ಕ ಮತ್ತು ವಾಣಿಜ್ಯ ಕಟ್ಟಡ ತೆರಿಗೆಯನ್ನು ಭಾರೀ ಹೆಚ್ಚಳ ಮಾಡಲಾಗಿದ್ದು ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಸ್ತ ಅಭಿವೃದ್ಧಿಗಾಗಿ ಮೀಸಲಿರಿಸಿದ ಅನುದಾನವನ್ನು ಕಾರ್ಕಳ ಪುರಸಭೆಗೆ ವರ್ಗಾಯಿಸಲಾಗಿದ್ದು, ಅದರ ಜೊತೆಗೆ ಹಿಂದಿನ ಶಾಸಕರ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಂಜೂರಾಗಿದ್ದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಲಾಗುತ್ತಿದೆ.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಸಾಧಿಕ್, ಕೆಪಿಸಿಸಿ ಮುಖಂಡ ಎಂ.ಎ. ಗಫೂರ್, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಯುವ ಮುಖಂಡ ಅಜಿತ್ ಕುಮಾರ್ ಹಿರಿಯಡಕ ಮೊದಲಾದವರು ಮಾತನಾಡಿದರು.

ಪ್ರತಿಭಟನಾ ಸಭೆಯ ಬಳಿಕ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ ಅವರ ಮೂಲಕವಾಗಿ ಉಡುಪಿ ಜಿಲ್ಲಾಧಿಕಾರಿಯವರಿಗೆ ವಿವಿಧ ಬೇಡಿಕೆಗಳ ಮನವಿ ಪಟ್ಟಿಯನ್ನು ಸಲ್ಲಿಸಲಾಯಿತು.

ತಾಲ್ಲೂಕು ಪಂಚಾಯತ್ ಸದಸ್ಯರಾದ ಯು.ಸಿ. ಶೇಖಬ್ಬ, ಮೈಕಲ್ ರಮೇಶ್ ಡಿ. ಸೋಜ, ರಾಜೇಶ್ ಶೆಟ್ಟಿ ಪಾಂಗಾಳ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷರಾದ ಸೌಮ್ಯ ಎಸ್., ಮಾಲಿನಿ, ಮಾಜಿ ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಸದಸ್ಯರಾದ ವಿಜಯಲಕ್ಷ್ಮಿ ಕೋಟ್ಯಾನ್, ಅಶ್ವಿನಿ ನವೀನ್, ಸುಲೋಚನಾ ಬಂಗೇರ, ಶಾಬು ಸಾಹೇಬ್, ಶಾಂತಲತಾ ಶೆಟ್ಟಿ, ಅಬ್ದುಲ್ ಹಮೀದ್, ಸುರೇಶ್ ದೇವಾಡಿಗ, ಪಕ್ಷದ ಮುಖಂಡರಾದ ಸರಸು ಡಿ. ಬಂಗೇರ, ಮಾಧವ ಆರ್. ಪಾಲನ್, ಶಿವಾಜಿ ಎಸ್. ಸುವರ್ಣ, ವೈ. ಗಂಗಾಧರ ಸುವರ್ಣ, ಪ್ರಶಾಂತ್ ಜತ್ತನ್ನ, ಕೇಶವ ಹೆಜಮಾಡಿ, ಅಖಿಲೇಶ್ ಕೋಟ್ಯಾನ್, ದೀಪಕ್ ಕುಮಾರ್ ಎರ್ಮಾಳು, ವೈ. ಸುಧೀರ್ ಕುಮಾರ್, ಅಮೀರ್ ಕಾಪು, ಹರೀಶ್ ನಾಯಕ್, ನವೀನ್ ಎನ್. ಶೆಟ್ಟಿ, ಸುನೀಲ್ ಬಂಗೇರ, ಅಶೋಕ್ ರಾವ್, ಶ್ರೀಕರ ಅಂಚನ್, ಶಾರದಾ ಪೂಜಾರ್ತಿ, ಸುಜಾತ ಸುವರ್ಣ, ನಾಗೇಶ್ ಸುವರ್ಣ ಮೊದಲಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News